ಕುಶಾಲನಗರ, ಆ. ೯: ಕುಶಾಲನಗರ ಫಾತಿಮಾ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಅಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.

ಫಾತಿಮಾ ಕಾನ್ವೆಂಟ್ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸೋಮವಾರಪೇಟೆ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೪೬ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದೀರ್ಘ ೫೦ ವರ್ಷಗಳ ನಿರಂತರ ಪ್ರಯತ್ನದ ಮೂಲಕ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೃಷ್ಣಪ್ಪ, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು.

ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಆಗ್ನೆಸ್ ಜಾನಪದ ಮನರಂಜನೆಗೆ ಸೀಮಿತವಾಗದೆ ಪಾರಂಪರಿಕ ಶ್ರೀಮಂತ ಕಲೆಯಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವೇ ಹೊರತು ಗೆಲುವು ಮುಖ್ಯವಲ್ಲ ಎಂದ ಅವರು, ಜಾನಪದ ಸೊಗಡನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡುವಂತಾಗ ಬೇಕು ಎಂದರು.

ಸAಸ್ಥೆಯ ವತಿಯಿಂದ ಬಿಇಓ ಎಂ. ಕೃಷ್ಣಪ್ಪ, ಸಿಆರ್‌ಪಿ ವಿಶ್ವನಾಥ್ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳಾದ ಹಿತೇಶ್ ಮತ್ತು ಹಿರಿಯ ಶಿಕ್ಷಕಿ ಭಾರತಿ ದೇವಯ್ಯ ಅವರುಗಳನ್ನು ಸನ್ಮಾನಿಸಿ, ಗೌರವಿಸಿದರು.

ಜಾನಪದ ಸ್ಪರ್ಧೆಗಳು ಮೂರು ಹಂತಗಳಲ್ಲಿ ನಡೆದು ೧೫ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ತಂಡ ಪಾಲ್ಗೊಂಡು ಜಾನಪದ ನೃತ್ಯ ಪ್ರದರ್ಶನ ನೀಡಿದರು. ಇದೇ ಸಂದರ್ಭ ಫಾತಿಮಾ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ವೆಬ್ಸೈಟ್ ಅನ್ನು ಬಿಇಓ ಎಂ. ಕೃಷ್ಣಪ್ಪ ಮತ್ತು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮೂಲಕ ಲೋಕಾರ್ಪಣೆ ಮಾಡಲಾಯಿತು.

ಶಿಕ್ಷಣ ಸಂಸ್ಥೆಯ ಪ್ರಮುಖರಾದ ಸಿಸ್ಟರ್ ಅರ್ಪಿತ, ಸಿಸ್ಟರ್ ಫ್ಲೋರೆಟ್ ಸಿಸ್ಟರ್ ಸೋಫಿಯಾ, ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ತೀರ್ಪುಗಾರರು ಇದ್ದರು.

ಶಿಕ್ಷಕಿಯರಾದ ಲಿಜೆಟ್ ಕಾರ್ಯಕ್ರಮ ನಿರೂಪಿಸಿದರು. ಲೂಸಿ ಸ್ವಾಗತಿಸಿ, ಡೇಸೀ ವಂದಿಸಿದರು.