ಕುಶಾಲನಗರ, ಆ. ೮: ಕುಶಾಲನಗರ ಸಮೀಪ ಬಸವನಹಳ್ಳಿ ಬಳಿ ಶಾಲಾ ಕಾಂಪೌAಡ್ ಗೇಟ್ ಕಳಚಿ ಬಿದ್ದು ಸಾವನ್ನಪ್ಪಿದ ಪುಟ್ಟ ಬಾಲಕಿಯ ಮನೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಐಟಿಡಿಪಿ ಇಲಾಖೆಯಿಂದ ತಕ್ಷಣ ಒಂದು ಲಕ್ಷ ಪರಿಹಾರ ನೀಡಲಾಗಿದ್ದು, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಮಗುವಿನ ಅಂತ್ಯಕ್ರಿಯೆಗೆ ರೂ. ೧೦ ಸಾವಿರ ಹಸ್ತಾಂತರಿಸಲಾಯಿತು.
ಪ್ರಕೃತಿ ವಿಕೋಪ ನಿಧಿಯಿಂದ ರೂ. ೫ ಲಕ್ಷ ಕುಟುಂಬ ಸದಸ್ಯರಿಗೆ ನೀಡಲಾಗುವುದು. ದೊರಕುವ ಪರಿಹಾರ ಹಣವನ್ನು ಮಕ್ಕಳ ಹೆಸರಿನಲ್ಲಿ ನಿರಖು ಠೇವಣಿ ಇಡುವಂತೆ ಶಾಸಕರು ಸಲಹೆ ನೀಡಿದರು.
ಗಿರಿಜನ ಹಾಡಿಯ ಸತೀಶ್ ಮತ್ತು ಪವಿತ್ರ ದಂಪತಿ ಪುತ್ರಿ ಅಪೂರ್ವ (೪) ಶಾಲೆಯ ಬಳಿ ಆಟವಾಡಲು ತೆರಳಿದ ಸಂದರ್ಭ ಗೇಟ್ ಕಳಚಿ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿತ್ತು.
ಇಂದು ಬಾಲಕಿಯ ಅಂತ್ಯ ಸಂಸ್ಕಾರ ನಡೆದಿದ್ದು, ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ, ಸ್ಥಳಿಯ ಗ್ರಾಮ ಪಂಚಾಯಿತಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಆರ್.ಕೆ. ಚಂದ್ರ, ನಂಗಾರು ಜಗ, ಅಧಿಕಾರಿಗಳಾದ ಭಾಗೀರಥಿ, ಸಿದ್ದೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮತ್ತು ಸ್ಥಳೀಯ ಪ್ರಮುಖರು ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು.
ಶಾಸಕರು ಹಾಡಿಗಳ ವ್ಯಾಪ್ತಿಯಲ್ಲಿರುವ ಶಿಥಿಲ ಕಟ್ಟಡಗಳನ್ನು, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು.
ಜಿಲ್ಲೆಯ ಎಲ್ಲಾ ಹಾಡಿಗಳಲ್ಲಿ ತಕ್ಷಣ ಅಲ್ಲಿನ ಸಮಗ್ರ ಮಾಹಿತಿ ಪಡೆಯುವುದರೊಂದಿಗೆ ತಮ್ಮ ಉಪಸ್ಥಿತಿಯಲ್ಲಿ ವಿಶೇಷ ಸಭೆಗಳನ್ನು ಏರ್ಪಡಿಸಬೇಕು.
ಈ ರೀತಿಯ ಘಟನೆ ಯಾವುದೇ ಹಾಡಿಗಳಲ್ಲಿ ಅಥವಾ ಗ್ರಾಮಗಳಲ್ಲಿ ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.