ವೀರಾಜಪೇಟೆ, ಆ. ೮: ವೀರಾಜಪೇಟೆ ಸಮೀಪದ ಬೊಳ್ಳರಿಮಾಡು ಗ್ರಾಮದ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಕಾಡನೆಗಳ ಹಾವಳಿ ಹೆಚ್ಚಾಗಿದ್ದು ಜನ ಕಂಗೆಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ. ಮೂರು ತಿಂಗಳ ಹಿಂದೆ ಹುಲಿ ದಾಳಿಗೆ ಕರು ಬಲಿಯಾದರೆ ಆರು ತಿಂಗಳ ಹಿಂದೆ ಹಸು ಬಲಿಯಾಗಿತ್ತು, ಇದೀಗ ಬೊಳ್ಳರಿಮಾಡು ಗ್ರಾಮದಲ್ಲಿ ಕಾಡಾನೆ ಹಾಗೂ ಕೆಲವೊಮ್ಮೆ ಹುಲಿ ಕಾಫಿ ತೋಟದಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಆನೆಗಳು ರಾತ್ರಿ ವೇಳೆ ಬಿದ್ದಂಡ ಕರುಂಬಯ್ಯ ಅವರ ತೋಟದಲ್ಲಿ ಬಾಳೆ ಗಿಡ ಹಾಗೂ ಸಿ.ಸಿ ಕ್ಯಾಮರಾ, ಕಬ್ಬಿಣದ ಗೇಟ್ ಸೇರಿದಂತೆ ಕಾಫಿ ಗಿಡಗಳನ್ನು ಧ್ವಂಸ ಮಾಡಿವೆ. ಅಲ್ಲದೇ ಲೈನ್‌ಮನೆಯ ಬಳಿಯಿದ್ದ ಇನ್ನೊಂದು ತೋಟಕ್ಕೆ ತೆರಳಿದೆ. ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರು ಜೀವ ಭಯದಲ್ಲಿ ರಾತ್ರಿ ಕಳೆದಿದ್ದಾರೆ, ಬೆಳಗಿನ ಜಾವ ಮಾಲೀಕರಿಗೆ ಮಾಹಿತಿ ನೀಡಿದ ಕಾರ್ಮಿಕರು ಕಾಡಾನೆ ಧ್ವಂಸ ಮಾಡಿದ ಸ್ಥಳವನ್ನು ಪರಿಶೀಲಿಸಿದಾಗ ಹುಲಿ ಹೆಜ್ಜೆ ಗುರುತು ಕೂಡ ಪತ್ತೆಯಾಗಿದ್ದು, ಕಾರ್ಮಿಕರು ಭಯದಿಂದ ಮನೆಗೆ ತೆರಳಿದ್ದಾರೆ.

“ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ವನ್ಯಪ್ರಾಣಿಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀದಿದ್ದೇವೆ. ಗ್ರಾಮದಲ್ಲಿ ವನ್ಯಜೀವಿಗಳ ಹಾವಳಿಯಿಂದ ಯಾವುದೇ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಫಿ ಕೆಲಸ ಪ್ರಾರಂಭವಾಗುತ್ತದೆ. ಇದರೊಂದಿಗೆ ಭತ್ತದ ಕೊಯ್ಲು ಕೆಲಸ ನಡೆಯಬೇಕಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ತೋಟ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ, ನಮಗೆ ಹಾಗೂ ಕಾರ್ಮಿಕ ಜೀವಕ್ಕೆ ಹಾನಿಯಾದರೆ ಯಾರನ್ನು ಕೇಳುವುದು, ಮತ್ತು ಇದಕ್ಕೆ ಹೊಣೆ ಯಾರು? ಕೂಡಲೆ ಅರಣ್ಯ ಇಲಾಖೆಯವರು ವನ್ಯ ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಬೆಳೆಗಾರರಾದ ಬಿದ್ದಂಡ ಮಂದಪ್ಪ ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಮಾಹಿತಿಯಂತೆ ಸಂಜೆ ೪ ಗಂಟೆಯಿAದ ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿ ವರ್ಷ ನಮಗೆ ಇದೇ ರೀತಿಯ ತೊಂದರೆ. ನಾವು ತೋಟದಲ್ಲಿ ಕಾಫಿ, ತೆಂಗು, ಅಡಿಕೆ, ಬಾಳೆ ಬೆಳೆದಿದ್ದು, ಎಲ್ಲ ನಾಶವಾಗಿದೆ. ಮನೆಯ ಕಾಂಪೌAಡ್, ಸಿಸಿಟಿವಿಗಳನ್ನು ಕೂಡ ಕಾಡಾನೆ ಧ್ವಂಸ ಮಾಡಿದೆ.

ಅಧಿಕಾರಿಗಳು ಪರಿಹಾರದ ಆಶ್ವಾಸನೆ ಕೊಟ್ಟು ಹೋಗುತ್ತಾರೆ, ಆದರೆ ಇದುವರೆಗೂ ಯಾವ ಆಶ್ವಾಸನೆಯನ್ನು ಈಡೇರಿಸಲೇ ಇಲ್ಲ ಎಂದು ಬಿದ್ದಂಡ ಬೆಳೆಗಾರ ಕರುಂಬಯ್ಯ ಹೇಳಿದ್ದಾರೆ.

ಅರಣ್ಯ ಇಲಾಖೆಯ ವೀರಾಜಪೇಟೆ ವಿಭಾಗದ ಇಟಿಪಿ, ಆರ್‌ಆರ್‌ಟಿ, ವೀರಾಜಪೇಟೆ, ಅಮ್ಮತ್ತಿ, ಪಾಲಂಗಾಲ ವಲಯದ ಸುಮಾರು ೩೫ ಸಿಬ್ಬಂದಿಗಳು, ಅಧಿಕಾರಿಗಳು ಕಾರ್ಯಾಚರಣೆ ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಮ್ ತಿಳಿಸಿದ್ದಾರೆ.