ಪೊನ್ನAಪೇಟೆ, ಆ. ೮: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ತಾ. ೯ರಂದು (ಇಂದು) ವೀರಾಜಪೇಟೆ ಸಮೀಪದ ಕೊಮ್ಮೆತೋಡಿನಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-೨೦೨೬ ಜರುಗಲಿದೆ. ಫುಟ್ಬಾಲ್, ಪುರುಷರ ಹಗ್ಗಜಗ್ಗಾಟ ಸೇರಿದಂತೆ ವಿವಿಧ ವಿಭಾಗಗಳ ಕೆಸರುಗದ್ದೆ ಓಟದ ಸ್ಪರ್ಧೆಯೊಂದಿಗೆ ಆಯೋಜಿಸಲಾಗಿರುವ ಈ ಸಂಗಮದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಇದಕ್ಕಾಗಿ ವೀರಾಜಪೇಟೆ - ಅಮ್ಮತಿ ಮುಖ್ಯರಸ್ತೆಯಲ್ಲಿರುವ ಕೊಮ್ಮೆತೋಡು ಸೇತುವೆ ಬಳಿಯ ಭತ್ತದ ಗದ್ದೆಯನ್ನು ಸಜ್ಜುಗೊಳಿಸಲಾಗಿದೆ.

ಫುಟ್ಬಾಲ್ ಪಂದ್ಯಾವಳಿಗೆ ೨೨ ತಂಡಗಳು ಮತ್ತು ಪುರುಷರ ಹಗ್ಗಜಗ್ಗಾಟಕ್ಕೆ ೯ ತಂಡಗಳು ಈಗಾಗಲೇ ಹೆಸರು ನೋಂದಾಯಿಸಿಕೊAಡಿದ್ದು, ಈ ತಂಡಗಳು ಇಂದು ಪ್ರಶಸ್ತಿಗಾಗಿ ಕೆಸರುಗದ್ದೆಯಲ್ಲಿ ಹಣಾಹಣಿ ನಡೆಸಲಿದೆ. ಕ್ರೀಡಾಸಂಗಮದ ಅಂಗವಾಗಿ ಒಟ್ಟು ಐದು ವಿಭಾಗಗಳಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಲಿದೆ. ೧ರಿಂದ ೪ನೇ ತರಗತಿವರೆಗಿನ ಪುಟ್ಟ ಮಕ್ಕಳ ವಿಭಾಗ, ೫ರಿಂದ ೮ನೇ ತರಗತಿವರೆಗಿನ ಸಬ್ ಜೂನಿಯರ್ ವಿಭಾಗ, ೯ ರಿಂದ ದ್ವಿತೀಯ ಪಿಯುಸಿ ತರಗತಿವರೆಗಿನ ೧೭ ವರ್ಷದೊಳಗಿನ ವಿಭಾಗ, ಯಾವುದೇ ಪದವಿ ತರಗತಿ ವಿದ್ಯಾರ್ಥಿಗಳ ಕಾಲೇಜು ವಿಭಾಗ ಮತ್ತು ಕೊಡಗು ಜಿಲ್ಲೆಯ ನಿವಾಸಿಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾದ ಸಾರ್ವಜನಿಕ ವಿಭಾಗದಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ಜರುಗಲಿದೆ.

ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಕೆಸರುಗದ್ದೆ ಕ್ರೀಡಾ ಸಂಗಮ ೨೦೨೬ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಭಾಗವಹಿಸಲಿದ್ದಾರೆ. ಕೆ.ಎಂ.ಎಸ್.ಎ. ಗೌರವಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ಎಂ. ರಶೀದ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ನಾಪಂಡ ಮುತ್ತಪ್ಪ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕೆಎಂಎಸ್‌ಎ ಪ್ರಧಾನ ಕಾರ್ಯದರ್ಶಿ ಎಂ.ಎA. ಇಸ್ಮಾಯಿಲ್ ತಿಳಿಸಿದ್ದಾರೆ.