ಮಡಿಕೇರಿ, ಆ. ೭: ಹಳೇ ಆಚರಣೆಗಳು, ಸಂಪ್ರದಾಯಗಳು ಕೂಡ ಹಳೇ ತಲೆಮಾರಿನ ಜನರಂತೆ ಆಧುನಿಕ ಸಮಾಜದಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಜೀವಿಗಳ ಪ್ರಾಮುಖ್ಯತೆ ಬಗ್ಗೆ ಕಿರಿಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಆಗಬೇಕೆಂದು ಹಿರಿಯ ಸಾಹಿತಿ ಬಿ.ಆರ್. ಜೋಯಪ್ಪ ಕರೆ ನೀಡಿದರು.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಕ್ಕಡ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಆಟಿ ಸಡಗರ ಕಾರ್ಯಕ್ರಮದಲ್ಲಿ ಕಕ್ಕಡದ ಮಹತ್ವ ವಿಚಾರವಾಗಿ ಮಾತನಾಡಿದ ಜೋಯಪ್ಪ, ಪ್ರತೀ ಹಬ್ಬ ಮತ್ತು ಆಚರಣೆಗೂ ಮಹತ್ವವಿದೆ. ಹಿರಿಯರು ಅಂದಿನ ಕಾಲದಲ್ಲಿ ಸುಮ್ಮನೆ ಇಂತಹ ಆಚರಣೆಗಳನ್ನು ಜಾರಿಗೆ ತರಲಿಲ್ಲ. ಬದಲಿಗೆ, ಆರೋಗ್ಯವರ್ಧಕವಾದ ಅಂಶಗಳನ್ನೂ ಆಚರಣೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದರು. ಕಕ್ಕಡ ತಿಂಗಳಿನಲ್ಲಿ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಕಕ್ಕಡ ಮಾಸವು ಅಶುಭ ಎಂಬ ನಂಬಿಕೆಯಿದೆ. ಆದರೆ, ಕಕ್ಕಡ ಮಾಸವು ಮಳೆ ತೀವ್ರ ಹೆಚ್ಚಾಗಿರುವ ದಿನಗಳಲ್ಲಿಯೇ ಬರುವ ಕಾರಣ, ಹಿಂದಿನ ಕಾಲದಲ್ಲಿ ಇಂತಹ ದಿನಗಳಲ್ಲಿ ಸಮಾರಂಭಗಳನ್ನು ಆಯೋಜಿಸಲು ಕಷ್ಟ ಎಂಬ ಕಾರಣದಿಂದ ಮಾತ್ರವೇ ಕಕ್ಕಡ ಮಾಸದಲ್ಲಿ ಸಮಾರಂಭಗಳನ್ನು ಮಾಡುತ್ತಿರಲಿಲ್ಲ. ವೈಜ್ಞಾನಿಕ ಕಾರಣವೂ ಇದರ ಹಿಂದಿತ್ತು ಎಂದೂ ಜೋಯಪ್ಪ ವಿಶ್ಲೇಷಿಸಿದರು.
೫೦ ವರ್ಷಗಳ ಹಿಂದಿನ ಪರಿಸರದಂತೆಯೇ ಅಂದಿನ ಆಚರಣೆಗಳೂ ಇಂದಿನ ಕಾಲದಲ್ಲಿ ಮರೆಯಾಗುತ್ತಿದೆ. ಆಗಿದ್ದ ಭತ್ತದ ಗದ್ದೆಗಳ ವೈಭವ ಕೂಡ ಕಂಡುಬರದಾಗಿದೆ. ಫಸಲು ಕೂಡ ಆಗಿನಂತೆ ಇಲ್ಲ. ಏಲಕ್ಕಿ, ಕರಿಮೆಣಸು, ಕಿತ್ತಳೆ, ಭತ್ತ ಸೇರಿದಂತೆ ದೈನಂದಿನ ಜೀವನಕ್ಕೆ ಯಾವುದು ಅಗತ್ಯವೋ ಅಂತಹ ಕೃಷಿಯಿಂದ ವಿಮುಖರಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದೂ ಬಿ.ಆರ್. ಜೋಯಪ್ಪ ಎಚ್ಚರಿಸಿದರು.
ಹಿರಿಯರು ಮನೆಯಲ್ಲಿದ್ದರೇ ಅಂತಹ ಮನೆಗೆ ಗೌರವವಾಗುತ್ತದೆ. ಹಿರಿಯರ ಮಾರ್ಗದರ್ಶನ ಇದ್ದರೆ ಮನೆಮಂದಿ ಸಂತೋಷದಿAದ, ನೆಮ್ಮದಿಯಿಂದ ಜೀವಿಸಲು ಸಾಧ್ಯವಿದೆ. ಹಿರಿಯ ಜೀವಿಗಳ ಬಗ್ಗೆ ಅಲಕ್ಷö್ಯ ತೋರದೇ ಹಿರಿಯರನ್ನು ಗೌರವಿಸಿ ಎಂದು ಜೋಯಪ್ಪ ಕರೆ ನೀಡಿದರು.
ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಸತೀಶ್ ಬೊಳಾರ್ ಆಟಿ ಸಡಗರಕ್ಕೆ ಆಟಿ ಸೊಪ್ಪಿನ ಪಾಯಸ ಸೇವಿಸಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸತೀಶ್ ಬೊಳಾರ್, ಪ್ರಾಚೀನ ದಿನಗಳ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳಿದ್ದವು. ಮನೆ ಮುಂದೆ ತುಳಸಿ ಕಟ್ಟೆ ನಿರ್ಮಾಣ, ಸೆಗಣಿ ಸಾರಿಸುವಿಕೆಯಿಂದ ನೈಮ್ಯಲ್ಯ ಕಾಪಾಡುವಿಕೆ, ದೀಪ ಬೆಳಗಿಸುವ ಮೂಲಕ ಉತ್ತಮ ಎನರ್ಜಿಯ ಸಂಪಾದನೆ, ಶಂಖನಾದದ ಮಹತ್ವ ಮುಂತಾದ ಕಾರಣಗಳು ಇದ್ದವು. ಈಗ ನಗರೀಕರಣ ಹೆಚ್ಚಾಗುತ್ತಿರುವಂತೆಯೇ ಹಲವಷ್ಟು ಆಚರಣೆಗಳನ್ನು ಮರೆಯುತ್ತಿದ್ದೇವೆ. ಹಳೇ ಕಾಲದ ಊಟ, ಖಾದ್ಯಗಳು ಕೂಡ ಮರೆಯಾಗುತ್ತಿದೆ. ಇಂತಹ ಸಂದರ್ಭ ಆಟಿಯಂತಹ ಪ್ರಾಚೀನ ಆಚರಣೆಗಳು ನಮಗೆ ಸಂಪ್ರದಾಯಗಳಲ್ಲಿನ ಮಹತ್ವವನ್ನು ತಿಳಿಸುವಲ್ಲಿ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸಮಾಜದಲ್ಲಿ ಎಲ್ಲಾ ವಸ್ತುಗಳ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಜೀವನ ಮೌಲ್ಯ ಮಾತ್ರ ಇಳಿಮುಖವಾಗುತ್ತಿದೆ ಎಂದೂ ಸತೀಶ್ ಬೊಳಾರ್ ವಿಷಾಧಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಸ್ವಾಗತಿಸಿ, ಕಾರ್ಯದರ್ಶಿ ಡಾ. ಜಿ.ಡಿ. ಚೇತನ್ ವಂದಿಸಿದರು. ವಲಯ ೬ ರ ಸಹಾಯಕ ಗವರ್ನರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿಗಳಾದ ಪೊನ್ನಚ್ಚನ ಮಧುಸೂದನ್, ವಸಂತ್ ಕುಮಾರ್, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ರಿತೇಶ್ ಬಾಳಿಗ ಉಪಸ್ಥಿತರಿದ್ದರು. ಮಂಗಳೂರಿನ ಗಾಯಕಿ ಅನುಷ ಬೊಳಾರ್ ಅವರಿಂದ ಜಾನಪದ ಹಾಡು ಕೇಳುಗರ ಮನಸೆಳೆಯಿತು. ರೋಟರಿ ಜಿಲ್ಲೆಯ ಕ್ಲಬ್ ವಿಸ್ತರಣಾ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿದರು. ಕಟ್ಟೆಮನೆ ಸೋನಜಿತ್ ಅತಿಥಿ ಪರಿಚಯ ಮಾಡಿದರು.