ಸುಂಟಿಕೊಪ್ಪ, ಆ. ೭: ಸರಕಾರವು ಈ ಬಾರಿ ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಗಣೇಶೋತ್ಸವ ಆಚರಣೆ ವೇಳೆ ಬ್ಯಾಂಡ್ಸೆಟ್, ವಾಲಗ, ನಾಸಿಕ್ ಬ್ಯಾಂಡ್, ನಗಾರಿ ಅಂತಹವುಗಳನ್ನು ಬಳಕೆ ಮಾಡುವಂತೆ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ಸೂಚಿಸಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾ ಆವರಣದಲ್ಲಿ ಆಯೋಜಿಸಲಾಗಿದ್ದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಬಾರಿ ೨೪ ಗೌರಿ ಗಣೇಶ ಮೂರ್ತಿಗಳನ್ನು ಆಚರಣಾ ಸಮಿತಿಯವರು ಪ್ರತಿಷ್ಠಾಪಿಸಿದ್ದು ಅತ್ಯಂತ ವಿಜ್ರಂಭಣೆ, ಕಾನೂನು ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಮುನ್ನಡೆಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದ ಅವರು, ಈ ಬಾರಿಯೂ ಸರಕಾರದ ಮಾರ್ಗಸೂಚಿಗಳನ್ನು ಗ್ರಾಮಗಳಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕ ಸಮಿತಿಗಳು ಪಾಲಿಸುವಂತೆ ಕರೆ ನೀಡಿದರು. ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಮುಂಜಾಗ್ರತಾ ಕ್ರಮವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರಿಂದ ಪುಂಡ-ಪೋಕರಿಗಳು ಎಸಗುವ ಅಹಿತಕರ ಘಟನೆಗಳು ಸಂಭವಿಸದAತೆ ತಡೆಯಲು ಸಹಕರಿಯಾಗಲಿದೆ ಎಂದರು. ವಿದ್ಯುತ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಮಿತಿಯ ಈರ್ವರು ಪದಾಧಿಕಾರಿಗಳು ಕಾವಲು ಇರುವಂತೆ ಸೂಚಿಸಿದರು. ವಿಸರ್ಜನೆಯ ವೇಳೆ ನುರಿತ ಈಜು ಬಲ್ಲವರು ಇರಬೇಕು, ಅವರು ಸೂಕ್ತ ಭದ್ರತೆಯ ಜಾಕಿಟ್ ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜಿನೆಯ ವೇಳೆ ಅಲಂಕೃತ ಮಂಟಪ ಮೆರವಣಿಗೆಗೆ ತೆರಳುವ ಮಾರ್ಗಗಳ ಮಾಹಿತಿ ಹಾಗೂ ನಿಗದಿಗೊಂಡಿರುವ ಸಮಯವನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಮಾತನಾಡಿ, ಸರಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.