ಮಡಿಕೇರಿ ಆ. ೭ : ಜನತೆಯ ಕಾರ್ಯಕ್ರಮಗಳ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಶಾಮಿಯಾನ ಸಂಘದ ಸದಸ್ಯರ ಶ್ರಮ ಮೌಲ್ಯಕ್ಕೆ ನಿಲುಕದ್ದು. ಈ ವೃತ್ತಿಯಲ್ಲಿರುವವರು ಸಂಘದ ಮೂಲಕ ಒಗ್ಗಟ್ಟಿನಿಂದ ವೃತ್ತಿ ಜೀವನ ನಿರ್ವಹಿಸಲಿ ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ಕರೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿನ ಸ್ವಾಗತ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ನೂತನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಾದರೂ ಆರೋಗ್ಯಕರ ಸ್ಪರ್ಧೆ ಇರಬೇಕು. ಇಂಥ ಸ್ಪರ್ಧೆಯಿದ್ದಾಗ ಮಾತ್ರ ಕ್ರಿಯಾಶೀಲರು ಉದ್ಯಮದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ ನಾಗೇಂದ್ರ ಪ್ರಸಾದ್, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ವೃತ್ತಿಪರರಿಗೆ ಲಭಿಸುತ್ತದೆ. ಇಂಥ ಸ್ಟಾರ್ಟ್ ಅಪ್ ಉದ್ಯಮದ ಯೋಜನೆಗಳಿಗೆ ಸರ್ಕಾರದ ಸಹಾಯಧನದ ಪ್ರಯೋಜನ ಪಡೆದುಕೊಳ್ಳಿ, ಬಂಡಾವಳರಹಿತ ಉದ್ಯಮಗಳ ಪ್ರಾರಂಭಕ್ಕೆ ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದೂ ಅವರು ಸಲಹೆ ನೀಡಿದರು.

ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಸದಾ ಸವಾಲಿನ ನಡುವೆ ಮಲೆನಾಡು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಮಿಯಾನ ವೃತ್ತಿಯಲ್ಲಿನ ಶ್ರಮಜೀವಿಗಳಿಗೆ ತಮ್ಮದೇ ಸಂಘಟನೆ ಅತ್ಯಗತ್ಯವಾಗಿತ್ತು. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಾಕಷ್ಟು ಪರಿಶ್ರಮದಿಂದ ಧ್ವನಿ, ಬೆಳಕು, ಶಾಮಿಯಾನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕಾರ್ಯಕ್ರಮಗಳನ್ನು ಚಂದಗಾಣಿಸುವ ಈ ಶ್ರಮಜೀವಿಗಳ ಸಂಕಷ್ಟ ನಿವಾರಣೆಯಾಗಿ ಕಾರ್ಯಕ್ರಮದಂತೆಯೇ ಅವರ ಜೀವನವೂ ಸುಂದರವಾಗಲಿ ಎಂದು ಹಾರೈಸಿದರು. ಕೊಡಗು ಜಿಲ್ಲೆಯ ಕಾರ್ಯಕ್ರಮಗಳ ವ್ಯವಸ್ಥೆಗಳು ಹೊರಜಿಲ್ಲೆಯವರ ಬದಲಾಗಿ ಕೊಡಗು ಜಿಲ್ಲೆಯ ಶಾಮಿಯಾನದವರಿಗೇ ನೀಡುವ ನಿಟ್ಟಿನಲ್ಲಿ ಆಡಳಿತ ವ್ಯವಸ್ತೆ ಮತ್ತು ಸಂಘ ಸಂಸ್ಥೆಗಳು ಗಮನ ನೀಡಬೇಕೆಂದೂ ಅನಿಲ್ ಸಲಹೆ ನೀಡಿದರು. ರಾಜ್ಯದಲ್ಲಿ ೩೨ ಸಾವಿರ ಸದಸ್ಯರ ಮೂಲಕ ೧.೫೦ ಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡಿರುವ ಶಾಮಿಯಾನ ಸಂಘದವರು ಮತ್ತಷ್ಟು ಸಂಘಟಿತರಾದಲ್ಲಿ ಮಾತ್ರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗುತ್ತದೆ ಎಂದು ಅನಿಲ್ ಎಚ್.ಟಿ. ಹೇಳಿದರು.

ಕರ್ನಾಟಕ ರಾಜ್ಯ ಶಾಮಿಯಾನ, ಧ್ವನಿ, ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷÀ ಅಬ್ದುಲ್ ಕರೀಂ ಅತ್ತಾರ್ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ ಗಣೇಶೋತ್ಸವ ಸಂದರ್ಭ ಡಿಜೆ ಅಳವಡಿಕೆ ಸಂದರ್ಭ ಕಠಿಣ ನಿಯಮಗಳನ್ನು ಪಾಲಿಸದೇ ನಿಯಮಗಳಲ್ಲಿ ಸಡಿಲಿಕೆ ಮಾಡಿ ಸಂಘದ ಸದಸ್ಯರಿಗೆ ನೆರವಾಗುವಂತೆ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯ ಸಂಘದ ಸ್ಥಾಪಕಾಧ್ಯಕ್ಷ ಮೆಹಬೂಬ್ ಸಿದ್ದಾಪುರ ಮಾತನಾಡಿ, ೧೨ ಜಿಲ್ಲೆಗಳಿಗೆ ಸೀಮಿತವಾಗಿ ಕೊಪ್ಪಳದಲ್ಲಿ ಪ್ರಾರಂಭವಾದ ಸಂಘವು, ಪ್ರಸ್ತುತ ರಾಜ್ಯವ್ಯಾಪಿ ಎಲ್ಲಾ ಜಿಲ್ಲೆಗಳಲ್ಲಿಯೂ ಇದೆ. ತಮ್ಮ ಕಾರ್ಮಿಕರು ಯಾವ ಇಲಾಖೆಗೆ ಸೇರಿದವರೆಂದೇ ಪ್ರಾರಂಭಿಕವಾಗಿ ಗೊತ್ತಿರಲಿಲ್ಲ. ಅಂದಿನ ಸರ್ಕಾರದ ಸಚಿವ ಸಂತೋಷ್ ಲಾಡ್ ಪ್ರಯತ್ನದಿಂದ ಕಾರ್ಮಿಕ ಇಲಾಖೆಯಲ್ಲಿ ಶಾಮಿಯಾನ ವ್ಯವಸ್ಥೆಯ ಕಾರ್ಮಿಕರು ನೋಂದಣಿಯಾಗಲು ಸಾಧ್ಯವಾಯಿತು.

ಇದು ಕಾರ್ಮಿಕರಿಗೆ ಸಾಕಷ್ಟು ಭರವಸೆಯನ್ನುಂಟು ಮಾಡುವ ತೀರ್ಮಾನವಾಗಿತ್ತು ಎಂದು ಹೇಳಿದರು. ಡಿಜೆ ನಿರ್ಭಂಧದಿAದ ಸಾಕಷ್ಟ ಸಮಸ್ಯೆಗಳನ್ನು ಸಂಘದ ಉದ್ಯಮಿ ಸದಸ್ಯರು ಎದುರಿಸುವಂತಾಗಿದ್ದು ಈ ನಿಟ್ಟಿನಲ್ಲಿ ಸಂಘದ ಸದಸ್ಯರ ಹಿತಕಾಯಲು ಸಕಾ೯ರ ನಿಯಮಗಳನ್ನು ಸಡಿಲಗೊಳಿಸಬೇಕೆಂದು ನುಡಿದರು.

ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ನೂತನ ಅಧ್ಯಕ್ಷ ಅಜ್ಜೇಟಿರ ಲೋಕೇಶ್ ಮಾತನಾಡಿ, ಪ್ರಸ್ತುತ ಸಂಘದಲ್ಲಿ ೧೪೦ ಸದಸ್ಯರಿದ್ದಾರೆ. ಸಂಘದ ಸದಸ್ಯರ ಹಿತ ಕಾಪಾಡುವುದರೊಂದಿಗೆ ಕ್ಷೇಮನಿಧಿಯನ್ನೂ ಪ್ರಾರಂಭಿಸಿ ಸದಸ್ಯರ ಕುಟುಂಬ ವರ್ಗಕ್ಕೆ ಕೂಡ ಪ್ರಯೋಜನವಾಗುವಂತೆ ಗಮನ ಹರಿಸಲಾಗುತ್ತದೆ ಎಂದರು. ಶಾಮಿಯಾನ, ಲೈಂಟಿAಗ್ ಕಾರ್ಯದಲ್ಲಿ ಹೊಸ ಹೊಸ ಸವಾಲುಗಳಿದ್ದು, ಸಂಘಟನೆಯ ಮೂಲಕ ಇಂತಹ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಬದ್ದ ಎಂದು ಲೋಕೇಶ್ ಹೇಳಿದರು.

ಸಂಘದ ಮೂಲಕ ಕೊಡಗಿನಲ್ಲಿ ಹಲವಾರು ವರ್ಷಗಳಿಂದ ಶಾಮಿಯಾನ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದ ಐವರನ್ನು ಸನ್ಮಾನಿಸಲಾಯಿತು,. ಮಡಿಕೇರಿಯ ಅನ್ವರ್, ಮೂರ್ನಾಡಿನ ಇಸ್ಮಾಯಿಲ್, ಸೋಮವಾರಪೇಟೆಯ ಅಶೋಕ್, ಪೊನ್ನಂಪೇಟೆಯ ವಿಜಯನ್, ಕುಶಾಲನಗರದ ಮಂಜುನಾಥ್ ಅವರೊಂದಿಗೆ, ಸಂಘದ ಮೊದಲ ಮಹಿಳಾ ಸದಸ್ಯೆ ತಿತಿಮತಿಯ ಪಂಕಜಾ ಮತ್ತು ಸ್ವಾಗತ್ ಸಭಾಂಗಣದ ಬಿದ್ರುಪಣೆ ಗಣೇಶ್ ದಂಪತಿಯನ್ನೂ ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ನೂತನ ಲೋಗೋವನ್ನೂ ಅನಾವರಣಗೊಳಿಸಲಾಯಿತು. ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ ಸಂಘದ ಸದಸ್ಯರು, ಕುಟುಂಬಸ್ಥರು ಕಾರ್ಯಕ್ರಮದಲ್ಲಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಕರ್ಷಿಸಿದವು.

ಸಂಘದ ಪ್ರಧಾನ ಕಾರ್ಯದರ್ಶಿ ಅವಿನ್ ಕುಮಾರ್ ವಂದಿಸಿದರು. ನವಿನ್ ಕುಲಾಲ್ ನಿರೂಪಿಸಿದರು.