ಮಡಿಕೇರಿ, ಆ. ೭: ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಖಚಿತ ಎಂದೇ ಬಿಂಬಿತವಾಗಿತ್ತು. ಅದಲ್ಲದೇ ಎಎಸ್ ಪೊನ್ನಣ್ಣ ಅವರು ಸಚಿವ ಸ್ಥಾನ ವಹಿಸಿಕೊಂಡು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ನಾನಾ ಚರ್ಚೆಗಳು, ಆಗ್ರಹಗಳು ಪಕ್ಷಾತೀತವಾಗಿ ಕೇಳಿಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿ, ಡೆಪ್ಯೂಟಿ ಸ್ಪೀಕರ್ ಹುದ್ದೆ ಒಲಿದಿದೆ.ಇದೀಗ ಮತ್ತೊಮ್ಮೆ ಕೊಡಗು ಜಿಲ್ಲೆಗೆ ಗೆಸ್ಟ್ ಉಸ್ತುವಾರಿ ಸಚಿವರೇ ಕಾರ್ಯನಿರ್ವಹಿಸುವಂತಾಗಿದೆ.
೨೦೧೨ರಿAದ ೨೦೧೩ರವರೆಗೆ ಕೇವಲ ಹತ್ತು ತಿಂಗಳು ಮಾತ್ರ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದ ಎಂಪಿ ಅಪ್ಪಚ್ಚು ರಂಜನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
೨೦೧೨ ರಿಂದ ೨೦೧೩ರ ಹತ್ತುಗಳು ಬಿಟ್ಟರೆ, ೨೦೦೪ರಿಂದಲೂ ಕೊಡಗಿನಲ್ಲಿ ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಯೂ ಕುಂಠಿತವಾಗುತ್ತದೆ ಎಂಬ ಮಾತುಗಳು ಜನವಲಯದಲ್ಲಿದೆ. ಹೊರ ಜಿಲ್ಲೆಯವರು ಉಸ್ತುವಾರಿ ಸಚಿವರಾದರೆ ಕೇವಲ ಕೆಡಿಪಿ ಸಭೆಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಅದಲ್ಲದೇ ಜಿಲ್ಲೆಯ ಭೌಗೋಳಿಕ ಪ್ರದೇಶದ ಬಗ್ಗೆ ಮಾಹಿತಿಯೇ ಇರಲ್ಲ. ಅದರೊಂದಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಸಕ್ತಿ ವಹಿಸಿ ಪರಿಹಾರ ಹುಡುಕುವುದು ಕಡಿಮೆ. ಸ್ವಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಅತಿಥಿಗಳು ಬಂದಾಗೆ ಬಂದು ಉಸ್ತುವಾರಿ ಸಚಿವರು ತೆರಳುತ್ತಾರೆ.
೧೯೯೯ರಿಂದ ೨೦೦೪ರ ಸುವರ್ಣ ಯುಗ
೧೯೯೯ರಿಂದ ೨೦೦೪ ಕೊಡಗು ಜಿಲ್ಲೆಯ ಪಾಲಿಗೆ ಸುವರ್ಣ ಯುಗ ಎಂದರೆ ತಪ್ಪಾಗಲಾರದು.
ಕೊಡಗು ಜಿಲ್ಲೆಯ ಮೂವರಿಗೆ ಎಸ್.ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಅಲ್ಲಿಂದೀಚೆಗೆ ಸತತವಾಗಿ ಕೊಡಗು ಜಿಲ್ಲೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ನಿರ್ಲಕ್ಷಿಸುತ್ತಾ ಬಂದಿವೆ. ೧೯೯೯ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಡಿಕೇರಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಎಂ.ಎA.ನಾಣಯ್ಯ ಅಬಕಾರಿ ಖಾತೆ ಜತೆಗೆ, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು. ಇದೇ ಅವಧಿಯಲ್ಲಿ ವೀರಾಜಪೇಟೆಯ ಶಾಸಕಿಯಾಗಿದ್ದ ಸುಮಾವಸಂತ್ ಮುಜರಾಯಿ ಸಚಿವೆಯಾಗಿದ್ದರು. ವಿಧಾನ ಪರಿಷತ್ ಸದಸ್ಯ ಟಿ.ಜಾನ್ ಮೂಲಸೌಕರ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ನಂತರದ ವರ್ಷಗಳಲ್ಲಿ ಕೊಡಗಿನ ಶಾಸಕರಿಗೆ ಮಂತ್ರಿ ಸ್ಥಾನವೇ ಮರೀಚಿಕೆಯಾಗಿದೆ. ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಅವಕಾಶ ಇದ್ದರೂ ಕೂಡ ಜಾತಿ, ಸಣ್ಣ ಜಿಲ್ಲೆ ಎಂಬ ಕಾರಣದಿಂದಾಗಿ ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆಯನ್ನು ಕಡೆಗಣಿಸುತ್ತಾ ಬಂದಿದೆ. ೨೦೦೪ ರಲ್ಲಿ ಕೋಲಾರ ಜಿಲ್ಲೆಯ ಅಲಂಗೂರು ಶ್ರೀನಿವಾಸ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ನಂತರ ೨೦೦೮ ರಿಂದ ೨೦೧೩ರವರೆಗೆ ರಾಜ್ಯವು ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಈ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಐವರು ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಿದ್ದಾರೆ.
ರಾಮಚಂದ್ರೇಗೌಡ, ಕೃಷ್ಣ ಪಾಲೇಮಾರ್, ರೇಣುಕಾಚಾರ್ಯ ಸಿ.ಎಚ್. ವಿಜಯಶಂಕರ್ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದ ಎಂಪಿ ಅಪ್ಪಚ್ಚು ರಂಜನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
೨೦೦೮ ರಿಂದ ೨೦೦೯ರವರೆಗೆ ಕೆ.ಜಿ ಬೋಪಯ್ಯ ಅವರು ಡೆಪ್ಯೂಟಿ ಸ್ಪೀಕರ್ ಹಾಗೂ ನಂತರ ೨೦೧೩ರವರೆಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಅಪ್ಪಚ್ಚು ರಂಜನ್ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರನ್ನಾಗಿ ನೇಮಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಅಲ್ಲಿಂದೀಚೆಗೆ ಕೊಡಗಿನ ಶಾಸಕರಿಗೆ ಮಂತ್ರಿ ಭಾಗ್ಯವೇ ಇಲ್ಲ.
೨೦೧೩-೧೮ರವರೆಗೆ ಕಾಂಗ್ರೆಸ್ ಸರ್ಕಾರ ಕೊಡಗಿನಲ್ಲಿ ಬಿಜೆಪಿ ಸರ್ಕಾರ
೨೦೧೩ರಿಂದ ೨೦೧೮ರವರೆಗೆ ಕೊಡಗಿನಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಸಿದ್ದಾರಾಮಯ್ಯ ಸರ್ಕಾರದಲ್ಲಿ ಕೊಡಗು ಜಿಲ್ಲೆಯು ನಾಲ್ವರು ಉಸ್ತುವಾರಿ ಸಚಿವರನ್ನು ಕಂಡಿದೆ. ಎಚ್.ಸಿ ಮಹದೇವಪ್ಪ, ಕೊಡಗು ಮೂಲದ ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್ ಹಾಗೂ ಎಂ.ಆರ್ ಸೀತಾರಾಮ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಯನ್ನು ವಹಿಸಿಕೊಂಡಿದ್ದರು.
೨೦೧೮ರಿAದ ೨೦೧೯ರವರೆಗಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾ.ರಾ ಮಹೇಶ್ ಅವರು ಕೊಡಗು ಉಸ್ತುವಾರಿ ಸಚಿವರಾಗಿದ್ದರು.
೨೦೧೯ರಿಂದ ೨೦೨೩ವರೆಗಿನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕೊಡಗಿನಲ್ಲಿ ಬಿಜೆಪಿ ಶಾಸಕರೇ ಇದ್ದರೂ ಕೂಡ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ನೀಡರಲಿಲ್ಲ. ಎರಡು ದಶಕಗಳಿಂದ ಬಿಜೆಪಿ ಶಾಸಕರು ಗೆಲ್ಲುತ್ತಾ ಬಂದಿದ್ದರೂ ಕೂಡ ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಅವಧಿಯಲ್ಲಿ ಕೊಡಗಿನ ಉಸ್ತುವಾರಿ ಸಚಿವರುಗಳಾಗಿ ಸುರೇಶ್ ಕುಮಾರ್, ವಿ.ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ಸಿ ನಾಗೇಶ್ ಅವರು ಕಾರ್ಯನಿರ್ವಹಿಸಿದ್ದರು.
ಕೊಡಗಿನ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದ ಸಚಿವರು
೨೦೨೩ರಲ್ಲಿ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸ್ಥಾನವಹಿಸಿಕೊಳ್ಳಲು ಬಹುತೇಕ ಸಚಿವರುಗಳು ಹಿಂದೇಟು ಹಾಕಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೊಡಗು ಮೂಲದ ದಿನೇಶ್ ಗುಂಡೂರಾವ್ ಹಾಗೂ ಕೆ.ಜೆ. ಜಾರ್ಜ್ ಅವರು ಮಂತ್ರಿಯಾಗಿದ್ದರೂ ಕೂಡ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡಿರಲಿಲ್ಲ. ಅದಲ್ಲದೇ ಪಿರಿಯಾಪಟ್ಟಣದ ಶಾಸಕ ವೆಂಕಟೇಶ್ ಅವರು ಕೂಡ ಹಿಂದೇಟು ಹಾಕಿದ್ದರು.ಕೊನೆಯದಾಗಿ ರಾಯಚೂರು ಮೂಲದ ಎನ್.ಎನ್ ಭೋಸರಾಜು ಅವರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡಿದ್ದರು. ಈ ಆಯ್ಕೆ ಅಚ್ಚರಿಯಾಗಿತ್ತು. ಆರಂಭದಲ್ಲಿ ಜಿಲ್ಲೆಯ ಬಗ್ಗೆ ಆಸಕ್ತಿ ತೋರಿದ್ದ ಎನ್.ಎಸ್ ಭೋಸರಾಜು ಅವರು, ನಂತರದ ದಿನಗಳಲ್ಲಿ ಕೇವಲ ಕೆಡಿಪಿ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಉಸ್ತುವಾರಿ ಸಚಿವರುಗಳಿಗೆ ಶಾಸಕರನ್ನು ಮೀರಿ, ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಪಿ.ಎಂ ನರೇಂದ್ರ ಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯುವ ಸಾಧ್ಯತೆ
ಇದೀಗ ಕೊಡಗು ಜಿಲ್ಲೆಯ ಬರ ಮತ್ತು ಅತಿವೃಷ್ಟಿಯನ್ನು ಅವಲೋಕಿಸಿ ವರದಿ ನೀಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಳವಳ್ಳಿ ಶಾಸಕ ಹಾಗೂ ಸಚಿವ ಪಿಎಂ ನರೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಿದ್ದಾರೆ. ಈಗಾಗಲೇ ಸಚಿವರು ಜಿಲ್ಲೆಗೆ ಭೇಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಇದುವರೆಗೆ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜವಬ್ದಾರಿ ನೀಡಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ.ಮತ್ತೊಮ್ಮೆ ಚಲುವರಾಯಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಬಹುದು. ಮೈಸೂರಿಗೆ ಡಾ.ಯತೀಂದ್ರ ಹಾಗೂ ಚಾಮರಾಜನಗರ ಜಿಲ್ಲೆಗೆ ಅದೇ ಜಿಲ್ಲೆಯ ಸಚಿವರಾದ ಪುಟ್ಟರಂಗಶೆಟ್ಟಿ ಅವರಿಗೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಗೆ ಪಿಎಂ ನರೇಂದ್ರ ಸ್ವಾಮಿ ಅವರನ್ನೇ ಉಸ್ತುವಾರಿ ಸಚಿವರಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಳವಾಗಿದೆ. ಯಾರೇ ಬಂದರೂ,
ಬದಲಾವಣೆಯಾದರೂ ಕೂಡ ಕೊಡಗು ಜಿಲ್ಲೆಗೆ ಗೆಸ್ಟ್ ಉಸ್ತುವಾರಿಯೇ ಗತಿ ಎಂಬAತಾಗಿದೆ.