ಮಡಿಕೇರಿ, ಆ. ೭: ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟಕ್ಕೆ ತೆರಳುತ್ತಿದ್ದ ವೇಳೆ ಜಿಲ್ಲೆಯ ರೈತರನ್ನು ಪೊಲೀಸರು ತಡೆದು ವಶಕ್ಕೆ ಪಡೆದ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಕೊಡಗು ಸೇರಿದಂತೆ ಪಿರಿಯಾಪಟ್ಟಣ, ಗುಂಡ್ಲುಪೇಟೆ, ಮೈಸೂರು ಹಾಗೂ ಎಚ್.ಡಿ.ಕೋಟೆ ಭಾಗದ ರೈತರು ಪಾಲ್ಗೊಂಡು, ಶಾಂತಿಯುತವಾಗಿ ತೆರಳುತ್ತಿದ್ದ ರೈತರನ್ನು ತಡೆದು ವಶಕ್ಕೆ ಪಡೆದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಬಂಧನಕ್ಕೆ ಕಾರಣವೇನು ಎಂಬುದರ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜುಲೈ ೨೪ರಂದು ಶಾಂತಿಯುತವಾಗಿ ತೆರಳುತ್ತಿದ್ದ ರೈತರ ವಾಹನವನ್ನು ತಡೆದು ವಶಕ್ಕೆ ಪಡೆದಿರುವುದು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಘಟನೆ ಎಂದು ಬೇಸರ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯೊಂದಿಗೆ ರೈತ ಸಂಘವು ಸದಾ ಸಹಕಾರ ನೀಡಿದ್ದು, ಎಸ್‌ಪಿ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಆದರೆ ರೈತರನ್ನು ಎದುರಾಳಿಗಳಂತೆ ಕಾಣದೆ, ಬಂಧನಕ್ಕೆ ಕಾರಣವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಇದೊಂದು ಬೇಜವಾ ಬ್ದಾರಿ ತೀರ್ಮಾನ ವಾಗಿದ್ದು, ಅಪ್ರಬುದ್ಧತೆ ಎದ್ದು ಕಾಣುತ್ತಿದೆ. ರೈತರ ಬಂಧನದಿAದ ಮಾನಸಿಕ ವಾಗಿ ನೋವಾಗಿದೆ. ಅವರ ಕುಟುಂಬದವರಿಗೆ ಬೇಸರವಾಗಿದೆ. ಸರ್ಕಾರವೇ ರೈತ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಹಿರಿಯ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ರೈತರನ್ನು ವಶಕ್ಕೆ ಪಡೆದ ನಂತರ ಶಾಸಕರು ಮೌನವಹಿಸಿದರು. ಪೊಲೀಸ್ ಇಲಾಖೆ ಮಾದಕ ವಸ್ತು ಮಾರಾಟವನ್ನು ತಡೆಯಬೇಕು, ಜೈಲಿನಲ್ಲಿಯೇ ಕೊಲೆ ಘಟನೆ ನಡೆದಿದೆ. ಇಂತಹ ವಿಚಾರದಲ್ಲಿ ಕ್ರಮಕೈಗೊಳ್ಳಬೇಕಾದ ಪೊಲೀಸರು ಅಮಾಯಕ ರೈತರ ವಿರುದ್ಧ ಕ್ರಮಕೈಗೊಳ್ಳುತ್ತಿರುವುದು ಶೋಚನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಭರತ್ ಮಾತನಾಡಿ, ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟವು ನ್ಯಾಯಬದ್ಧವಾಗಿದ್ದು, ರಾಜ್ಯದ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಿವೆ. ಕೊಡಗಿನಿಂದ ಸುಮಾರು ೨೦೦ ರೈತರು ತೆರಳುತ್ತಿದ್ದಾಗ ಅವರನ್ನು ಮಾತ್ರ ತಡೆದು ವಶಕ್ಕೆ ಪಡೆದಿರುವುದು ಖಂಡನೀಯ. ಸಂವಿಧಾನವು ಪ್ರತಿಭಟನೆ ನಡೆಸುವ ಹಕ್ಕು ನೀಡಿದ್ದು, ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಜಾಥಾ ಹಾಗೂ ಪ್ರತಿಭಟನೆಗಳಿಗೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಶುಲ್ಕ ಹೆಚ್ಚಿಸುವಂತಹ ಕ್ರಮಗಳು ಚಳವಳಿಗಳನ್ನು ಕುಂಠಿತಗೊಳಿಸುವ ಉದ್ದೇಶ ಹೊಂದಿವೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ರೈತರಲ್ಲಿ ಮಾನಸಿಕ ಸ್ಥೆöÊರ್ಯ ತುಂಬಲು ತೆರಳಿದ್ದ ಸಂದರ್ಭದಲ್ಲೇ ಪೊಲೀಸರು ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಟೀಕಿಸಿದರು. ಎಚ್.ಡಿ.ಕೋಟೆ ತಾಲೂಕು ರೈತ ಸಂಘದ ಅಧ್ಯಕ್ಷ ಮಹದೇವನಾಯಕ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಇತರ ಜಿಲ್ಲೆಗಳ ರೈತರಿಗೆ ಅವಕಾಶ ನೀಡಿದಂತೆ ಕೊಡಗಿನ ರೈತರನ್ನೂ ಹೋಗಲು ಬಿಡಬೇಕಿತ್ತು. ತಡೆಯಬಾರದಿತ್ತು ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಮಾತನಾಡಿ, ಪ್ರತಿಭಟನಾಕಾರರ ಬಳಿ ಯಾವುದೇ ಆಯುಧಗಳಿರಲಿಲ್ಲ. ಸಂವಿಧಾನಬದ್ಧವಾಗಿ ಪ್ರತಿಭಟನೆ ನಡೆಸುವ ಹಕ್ಕಿದ್ದರೂ ವಿನಾಕಾರಣ ತೊಂದರೆ ನೀಡಲಾಗಿದೆ ಎಂದು ಆರೋಪಿಸಿದರು. ಪಿರಿಯಾಪಟ್ಟಣ ತಾಲೂಕು ರೈತ ಸಂಘ ಅಧ್ಯಕ್ಷ ಶಿವಣ್ಣ ಮಾತನಾಡಿ, ರೈತರು ಅಪರಾಧಿಗಳಲ್ಲ. ಬಂಧನದ ಕುರಿತು ಲಿಖಿತ ಸ್ಪಷ್ಟನೆ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ರೈತ ಮುಖಂಡ ಲೋಕೇಶ್ ರಾಜೇ ಅರಸು ಮಾತನಾಡಿ, ಕೃಷಿ ಭೂಮಿಯನ್ನು ಟೌನ್‌ಶಿಪ್‌ಗಳಾಗಿ ಪರಿವರ್ತಿಸುವುದು ರೈತರ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಅನ್ಯಾಯದ ವಿರುದ್ಧ ಹೋರಾಟ ನಡೆಸುವುದು ರೈತರ ಹಕ್ಕು. ಪ್ರತಿಭಟನೆಗೆ ತೆರಳುತ್ತಿದ್ದವರನ್ನು ಬಂಧಿಸಿರುವುದು ಆಕ್ಷೇಪಾರ್ಹ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಂಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಪ್ರಮುಖರಾದ ರಾಯ್ ಮಾದಪ್ಪ, ರೈತ ಮುಖಂಡ ಸುರೇಶ್ ಚಕ್ರವರ್ತಿ, ಅಜ್ಜಮಾಡ ಚಂಗಪ್ಪ, ಸವಿತಾ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಗೂರು ನಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ಬಿಗಿ ಭದ್ರತೆ

ಪ್ರತಿಭಟನೆ ಹಿನ್ನೆಲೆ ಪೊಲೀಸ್ ಬಿಗಿಬಂದೋಬಸ್ತ್ ಅನ್ನು ಕಲ್ಪಿಸಲಾಗಿತ್ತು. ನೂರಾರು ಪೊಲೀಸರು ನಿಯೋಜನೆಗೊಂಡಿದ್ದರು. ಎಸ್‌ಪಿ ಕಚೇರಿಯ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರು ಒಳನುಗ್ಗದಂತೆ ಕ್ರಮವಹಿಸಲಾಗಿತ್ತು. ಡಿವೈಎಸ್‌ಪಿಗಳು ಸೇರಿದಂತೆ ಸಿಪಿಐ, ಇನ್ಸ್ಪೆಕ್ಟರ್‌ಗಳು ನಿಗಾವಹಿಸಿದ್ದರು. ಡಿಎಆರ್ ತುಕಡಿ ಕೂಡ ಸ್ಥಳದಲ್ಲಿತ್ತು.