ಮಡಿಕೇರಿ, ಆ.೭: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಜಾದ್ ನಗರ, ಗದ್ದಿಗೆ, ಕುಂಬಳಗೇರಿ ಹಾಗೂ ಉಕ್ಕುಡ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಸ್ತನ್ಯಪಾನದ ಮಹತ್ವ ಹಾಗೂ ತಾಯಿ-ಮಕ್ಕಳ ಆರೋಗ್ಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಪ್ರತಿ ವರ್ಷ ಆಗಸ್ಟ್ ೧ ರಿಂದ ೭ ರವರೆಗೆ ವಿಶ್ವಾದ್ಯಂತ ಈ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಸ್ತನ್ಯಪಾನದ ಕುರಿತು ಜನಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ನಗರಸಭೆ ಕೌನ್ಸಿಲರ್ ಮನ್ಸೂರ್ ಮಾತನಾಡಿ, ಅಂಗನವಾಡಿಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಹಾಗೂ ಇಂತಹ ಅರಿವು ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು ಅತ್ಯಗತ್ಯವಾಗಿದ್ದು, ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಹಾಲನ್ನೇ ನೀಡಬೇಕು ಎಂದು ತಿಳಿಸಿದರು. ಈ ಅವಧಿಯಲ್ಲಿ ಜೇನುತುಪ್ಪ, ಸೊಪ್ಪಿನ ರಸ ಸೇರಿದಂತೆ ಯಾವುದೇ ಇತರೆ ಆಹಾರ ಅಥವಾ ದ್ರವವನ್ನು ನೀಡಬಾರದು ಹಾಗೂ ನಂತರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ವಯೋಸೂಕ್ತ ಪೂರಕ ಆಹಾರದೊಂದಿಗೆ ಸ್ತನ್ಯಪಾನವನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಸಮುದಾಯ ಆಧಾರಿತ ಚಟುವಟಿಕೆಯ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪೋಷಣ್ ಜಿಲ್ಲಾ ಸಂಯೋಜಕ ನಿತಿನ್, ಕಬ್ಬಿಣಾಂಶಯುಕ್ತ ಆಹಾರ ಸೇವನೆ ಹಾಗೂ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆಜಾದ್ ನಗರ ಅಂಗನವಾಡಿ ಸಹಾಯಕಿ ಪ್ರೇಮಾ ಪ್ರಾರ್ಥನೆ ನೆರವೇರಿಸಿದರು. ಆಜಾದ್ ನಗರ ಅಂಗನವಾಡಿ ಕಾರ್ಯಕರ್ತೆ ಪಾರಿಜಾತ್ ಕಾರ್ಯಕ್ರಮ ನಿರೂಪಿಸಿದರು. ಗದ್ದಿಗೆ ಅಂಗನವಾಡಿ ಕಾರ್ಯಕರ್ತೆ ಅನ್ನತ್ ಬೇಬಿ ಸ್ವಾಗತಿಸಿದರು. ಉಕ್ಕುಡ ಅಂಗನವಾಡಿ ಸಹಾಯಕಿ ಸ್ನೇಹ ವಂದಿಸಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.