ಕೂಡಿಗೆ, ಆ. ೭: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಅಣೆಕಟ್ಟೆಯ ನೀರನ್ನು ಹರಿಸಲಾಗುತ್ತಿದೆ. ಆದರೆ ಈ ಬಾರಿ ಈ ಹಿಂದಿನ ವರ್ಷಗಳಿಗಿಂತ ಮಳೆಯ ಕೊರತೆ ಎದುರಾದ ಹಿನ್ನೆಲೆ ಕುಡಿಯುವ ನೀರಿನ ಬಳಕೆಗೆ ಮಾತ್ರ ನೀರು ಉಪಯೋಗಿಸುವಂತೆ ನಿರ್ದೇಶನ ಇರುವುದರಿಂದ ರೈತರ ಬೇಸಾಯಕ್ಕೆ ಅಗತ್ಯವಾದ ನೀರು ಸಿಗುತ್ತಿಲ್ಲ. ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲಾಗುತ್ತಿದೆಯಾದರೂ ಬೇಸಾಯಕ್ಕೆ ನಾಲೆಯ ಮೂಲಕ ನೀರಿನ ಹರಿವು ಅಗತ್ಯವಿದ್ದು, ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಇದಕ್ಕಾಗಿ ಕಾಯುತ್ತಿದ್ದಾರೆ.
ಜಿಲ್ಲೆಯ ಕುಶಾಲನಗರ ತಾಲೂಕು ಹಾರಂಗಿ ಅಚ್ಚುಕಟ್ಟು ಪ್ರದೇಶ ಸಾವಿರಾರು ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ರೈತರು ಕಳೆದ ೫೦ ವರ್ಷಗಳಿಂದಲೂ ರೂಢಿಯಂತೆ ಅಣೆಕಟ್ಟೆಯ ಮುಖ್ಯ ನಾಲೆಯ ನೀರನ್ನು ಅವಲಂಬಿಸಿದ್ದಾರೆ.
ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಟಿಯನ್ನು ಆಗಸ್ಟ್ ತಿಂಗಳಲ್ಲಿ ಮಾಡಿದರೆ ಬೆಳೆಯು ಉತ್ತಮವಾಗಿ ಬರುವುದರಿಂದ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಕೊಡಗಿನ ಗಡಿ ಭಾಗದವರೆಗೆ ಭತ್ತದ ನಾಟಿಗೆ ನಾಲೆಯ ಮೂಲಕ ನೀರು ಹರಿಸುವಂತೆ ಈ ವ್ಯಾಪ್ತಿಯ ನೂರಾರು ರೈತರ ಆಗ್ರಹವಾಗಿದೆ.
ಕೆ. ಕೆ. ನಾಗರಾಜಶೆಟ್ಟಿ