ಮಡಿಕೇರಿ, ಆ. ೬: ನ್ಯಾಷನಲ್ ಕ್ರಷ್ ಖ್ಯಾತಿಯ ಬಾಲಿವುಡ್ ಸೇರಿದಂತೆ ಬಹುಭಾಷಾ ನಟಿಯಾಗಿರುವ ಕೊಡಗಿನ ಮೂಲದ ರಶ್ಮಿಕಾ ಮಂದಣ್ಣ ಕೆಲದಿನದಿಂದೆ ರಣಬಾಲಿ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಇದೀಗ ಹಲವು ವಾರಗಳ ವಿಶ್ರಾಂತಿಯಲ್ಲಿದ್ದಾರೆ. ಶೂಟಿಂಗ್ ವೇಳೆ ಸೊಂಟಕ್ಕೆ ಪೆಟ್ಟಾಗಿ ಚೇತರಿಸಿಕೊಳ್ಳುತ್ತಿರುವ ರಶ್ಮಿಕಾ ಈ ವಿಶ್ರಾಂತಿಯ ಅವಧಿ ತಮಗೆ ಬಲವಂತದ ಹಾಲಿಡೇಯಂತಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಪ್ರತಿದಿನ ವರ್ಕೌಟ್ ಮಾಡದಿರುವುದು ನನಗೆ ತುಂಬಾ ಕಷ್ಟದ ಹಂತ. ಯಾಕೆಂದರೆ ನಾನು ಈವರೆಗೆ ಚೆನ್ನಾಗಿ ವರ್ಕೌಟ್ ಮಾಡುತ್ತಿದ್ದೆ ಮತ್ತು ಪ್ರಾಣಿಯಂತೆ ಓಡುತ್ತಿದ್ದೆ. ಇದರಿಂದ ನನಗೆ ಡೀಸೆಂಟ್ ದೇಹಾಕಾರ ಹೊಂದಲು ಸಾಧ್ಯವಾಗಿದೆ. ಆದರೆ, ಈಗ ನನಗೆ ವ್ಯಾಯಾಮ ಮಾಡಲು ಅಥವಾ ಓಡಲಾಗುತ್ತಿಲ್ಲ. ವರ್ಕೌಟ್ ಮಾಡಲಾಗದಿದ್ದರೆ ಮತ್ತೇನು ಮಾಡುವುದು, ತಿನ್ನುತ್ತಿರುತ್ತೇನೆ. ತಿಂದು ತಿಂದು ಡೆಸರ್ಟ್ ಮಾನ್‌ಸ್ಟರ್ ಆಗುತ್ತೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನನಗೆ ಆಗಿರುವ ಮೂರನೇ ಗಾಯವಿದು. ನನಗೆ ತೀವ್ರ ಪೆಟ್ಟಾಗಿದ್ದರೂ ಸಹಿಸಿಕೊಳ್ಳುವಂತ ನೋವಿದೆಯಷ್ಟೇ. ನಾನು ಬ್ರೇಕ್ ಪಡೆಯದೆ ನಿರಂತರ ಕೆಲಸ ಮಾಡುತ್ತಿರುವುದನ್ನು ಕಂಡು ದೇವರೇ ನನಗೆ ಈ ಘಟನೆಯ ಮೂಲಕ ಸೂಚನೆ ನೀಡಿರುವಂತೆ ಅನಿಸುತ್ತದೆ. ನಾನಿನ್ನು ನನ್ನ ದೇಹವನ್ನು ಯಂತ್ರದAತೆ ಟ್ರೀಟ್ ಮಾಡುವ ಬದಲು ಮನುಷ್ಯನ ದೇಹದಂತೆ ನೋಡಲು ಕಲಿಯುತ್ತೇನೆ ಎಂದು ರಶ್ಮಿಕಾ ಬರೆದಿದ್ದಾರೆ.