ವೀರಾಜಪೇಟೆ, ಆ. ೬: ನಗರದ ಪ್ರಮುಖ ರಸ್ತೆ ಹಾಗೂ ಕಾಲುದಾರಿಗಳಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ವಾಹನಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ರಸ್ತೆ ಬದಿ ಹಾಗೂ ‘ನೋ ಪಾರ್ಕಿಂಗ್’ ವಲಯಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದ ವಾಹನಗಳಿಗೆ ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಿದ ಮಾಲೀಕರಿಗೆ ಇ-ಚಲನ್ ಮೂಲಕ ದಂಡ ವಿಧಿಸಲಾಗುತ್ತಿದ್ದು, ಮಾಲೀಕರಿಗೆ ತೆರವುಗೊಳಿಸುವಂತೆ ಸೂಚನೆ ನೀಡಲಾಗುತ್ತಿದೆ.

ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಮಾಹಿತಿ ನೀಡಿ, ರಸ್ತೆ ಬದಿಯ ಆಕ್ರಮಣ ಹಾಗೂ ಅನಧಿಕೃತ ಪಾರ್ಕಿಂಗ್ ತೆರವುಗೊಳಿಸುವುದರಿಂದ ಸಾರ್ವಜನಿಕರಿಗೆ ಮತ್ತು ಪಾದಚಾರಿಗಳಿಗೆ ಅನುಕೂಲವಾಗಲಿದ್ದು, ಟ್ರಾಫಿಕ್ ಜಾಂ ಸಮಸ್ಯೆಗೆ ಮುಕ್ತಿ ಸಿಗಲಿದೆ. ಸಾರ್ವಜನಿಕರು ರಸ್ತೆ ಬದಿ ಹಾಗೂ ನೋ-ಪಾರ್ಕಿಂಗ್ ವಲಯಗಳಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.