ಮಡಿಕೇರಿ, ಆ. ೬: ಕಿಗ್ಗಾಲು ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿಯರು, ಬಾಣಂತಿಯರು ಹಾಗೂ ಫಲಾನುಭವಿಗಳಿಗೆ ಸ್ತನ್ಯಪಾನದ ಮಹತ್ವ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು, “ತಾಯಿಯ ಎದೆಹಾಲು ಮಗುವಿಗೆ ಅಮೃತಸಮಾನ. ಮಗುವಿನ ಜೀವನದ ಸುಸ್ಥಿರ ಆರಂಭಕ್ಕೆ ಸ್ತನ್ಯಪಾನ ಅತ್ಯಂತ ಮುಖ್ಯವಾಗಿದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ, ವ್ಯಾಯಾಮ ಹಾಗೂ ವಾಯುವಿಹಾರದ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಂಡು ಮಾನಸಿಕವಾಗಿ ತಾಯ್ತನಕ್ಕೆ ಸಿದ್ಧರಾಗಬೇಕು. ಇದರಿಂದ ಮಗುವಿನ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಎದೆಹಾಲಿನ ಉತ್ಪಾದನೆಯೂ ಉತ್ತಮವಾಗುತ್ತದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜನನ ಪ್ರಮಾಣಪತ್ರದ ನೋಂದಣಿ, ಮಾತೃ ವಂದನ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಆಶಾ ಕಾರ್ಯಕರ್ತೆ ಲೀಲಾವತಿ ಅವರು ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲುಣಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ, ಮಕ್ಕಳಿಗೆ ನೀಡಬೇಕಾದ ಚುಚ್ಚುಮದ್ದುಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಸುನಿತಾ, ಪುಷ್ಪ, ಅಂಗನವಾಡಿ ಕಾರ್ಯಕರ್ತೆ ಗೌರಿ, ಅಂಗನವಾಡಿ ಸಹಾಯಕಿ ಹರಿಣಿ ಹಾಗೂ ಗರ್ಭಿಣಿಯರು, ಬಾಣಂತಿಯರು ಮತ್ತು ಇತರ ಫಲಾನುಭವಿಗಳು ಭಾಗವಹಿಸಿದ್ದರು.