ಸೋಮವಾರಪೇಟೆ, ಆ. ೬: ತಾಲೂಕಿನ ಮಾದಾಪುರದಿಂದ ಮೂವತ್ತೊಕ್ಲು-ದೇವರಕಾಡು ಎಸ್ಟೇಟ್‌ಗೆ ಸಂಪರ್ಕ ಕಲ್ಪಿಸುವ ಮೂವತ್ತೊಕ್ಲು ಶಾಲಾ ರಸ್ತೆಯು ಮಳೆಯಿಂದ ಕುಸಿದು ಗುಂಡಿ ನಿರ್ಮಾಣವಾಗಿದ್ದು, ರಸ್ತೆ ಸಂಪೂರ್ಣವಾಗಿ ಕುಸಿದು ಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ನಿರಂತರ ಸುರಿದ ಮಳೆಯಿಂದ ರಸ್ತೆಯ ಮಧ್ಯಭಾಗದಲ್ಲಿ ಉಂಟಾಗಿರುವ ಗುಂಡಿ ವಿಸ್ತರಿಸುತ್ತಿದ್ದು, ರಸ್ತೆ ಮತ್ತಷ್ಟು ಕುಸಿಯಲು ಆರಂಭಿಸಿದೆ. ತಕ್ಷಣ ದುರಸ್ತಿ ಕೈಗೊಳ್ಳದಿದ್ದರೆ ಯಾವುದೇ ಕ್ಷಣದಲ್ಲಿ ರಸ್ತೆ ಸಂಪೂರ್ಣ ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಈ ರಸ್ತೆಯು ನಾಗಂಡ, ತಂಬುಕುತ್ತಿರ ಕುಟುಂಬಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ರಸ್ತೆ ಸಂಪೂರ್ಣ ಕುಸಿದರೆ ಸಾರ್ವಜನಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸಂಬAಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ರಸ್ತೆ ದುರಸ್ತಿಪಡಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.