ಸಿದ್ದಾಪುರ, ಆ. ೬: ಹಾಡಹಗಲೇ ಕಾಫಿ ತೋಟದೊಳಗೆ ಕೆಲಸ ನೋಡಿಕೊಳ್ಳುತ್ತಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ್ದು, ರೈತ ಮಹಿಳೆ ಗಂಭೀರ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾದ ಘಟನೆ ಮಾಲ್ದಾರೆ ಗ್ರಾಮದಲ್ಲಿ ಸಂಭವಿಸಿದೆ.
ಮಾಲ್ದಾರೆ ಗ್ರಾಮದ ಕಾಫಿ ಬೆಳೆಗಾರರಾದ ಮೂಡಗದ್ದೆ ಜಯ ಎಂಬವರ ಪತ್ನಿ ಲೀಲಾ(೬೦) ಎಂಬವರು ಪೂರ್ವಾಹ್ನ ೧೧ ಗಂಟೆ ಸಮಯದಲ್ಲಿ ತಮ್ಮ ಕಾಫಿ ತೋಟದೊಳಗೆ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ನೋಡಿಕೊಂಡಿದ್ದ ಸಂದರ್ಭ ಹಠಾತ್ತನೆ ಬಂದ ಚಿರತೆ ಏಕಾಏಕಿ ಲೀಲಾ ಅವರ ಮೇಲೆ ದಾಳಿ ನಡೆಸಿದೆ. ದಾಳಿಗೆ ಒಳಗಾದ ರೈತ ಮಹಿಳೆಯ ಎಡಭಾಗದ ಕಿವಿಗೆ ಮತ್ತು ದವಡೆಗೆ ಗಾಯಗೊಳಿಸಿದೆ. ಗಂಭೀರ ಗಾಯಗೊಂಡ ಲೀಲಾ ಅವರು ಕಿರುಚಿದಾಗ ಸ್ಥಳದಲ್ಲೇ ಇದ್ದ ಕಾರ್ಮಿಕರು ಬಂದು ಲೀಲಾ ಅವರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಗಂಭೀರ ಗಾಯಗೊಂಡ ಲೀಲಾ ಅವರನ್ನು ತಕ್ಷಣವೇ ಗೋಣಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಯಿತು. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಡಹಗಲೇ ನಡೆದ ಘಟನೆಯಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಸ್ಥಳಕ್ಕೆ ತೆರಳಿ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಲೀಲಾ ಅವರ ಆರೋಗ್ಯ ವಿಚಾರಿಸಿದರು. ಈ ಭಾಗದಲ್ಲಿ ಕಾಡಾನೆ ಹಾಗೂ ಹುಲಿಗಳ ಹಾವಳಿ ಇದ್ದು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಯಾಮರ ಅಳವಡಿಕೆ
ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಶಶಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸಿದರು. ಚಿರತೆಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಕಾಫಿ ತೋಟದೊಳಗೆ ಕ್ಯಾಮೆರಾ ಅಳವಡಿಸಲಾಗಿದೆ. ತೋಟದೊಳಗೆ ಬೋನ್ ಇರಿಸ ಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹಿಳೆಯ ಮೇಲೆ ದಾಳಿ ನಡೆಸಿದ ಚಿರತೆ ಗಾಯಗೊಂಡಿರುವುದಾಗಿ ಇದನ್ನು ಕೆಲವರು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಂದು ಕಾರ್ಯಾಚರಣೆ
ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ ಮೇರೆಗೆ ಅರಣ್ಯ ಇಲಾಖೆಯ ವತಿಯಿಂದ ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ. ಸ್ಥಳಕ್ಕೆ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.