ಕುಶಾಲನಗರ, ಆ. ೬: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಕುಶಾಲನಗರ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ೨೭ ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಕಾರ್ಗಿಲ್ ವಿಜಯದ ಕಾರ್ಯಾಚರಣೆಯ ಅನುಭವ ಕುರಿತು ೧೯೯೯ ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಹವಾಲ್ದಾರ್ ಕೂಡಿಗೆಯ ಮಹಮ್ಮದ್ ನಬಿ ಅವರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಪಿ.ಶಶಿಧರ್, ಅಂದು ದೇಶದ ಗಡಿ ರಕ್ಷಣೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿ ತವರಿಗೆ ಬಂದು ನಮ್ಮೊಂದಿಗಿದ್ದು, ಜನ ಸೇವೆಯಲ್ಲಿ ತೊಡಗಿರುವ ಮಹಮ್ಮದ್ ನಬಿಯಂತಹ ಮಾಜಿ ಯೋಧರ ಸಾಹಸ ನಮ್ಮ ಯುವಜನಾಂಗಕ್ಕೆ ಸ್ಪೂರ್ತಿ ನೀಡುತ್ತದೆ ಎಂದರು. ಕಾರ್ಗಿಲ್ ವಿಜಯೋತ್ಸವವು ವೀರ ಪರಂಪರೆಯ ಶೌರ್ಯ ಮತ್ತು ಪರಾಕ್ರಮದ ಯೋಧರ ಸಾಹಸಮಯ ಯುದ್ಧ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ ಸೈನಿಕರ ಸೇವೆ ಅನನ್ಯವಾದುದು ಎಂದರು.
ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಸೇನೆಯ ಎಂಇಜಿ ವಿಭಾಗದಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿನ ಕಾರ್ಯಾಚರಣೆಯ ಅನುಭವ ಕುರಿತು ನಿವೃತ್ತ ಹವಾಲ್ದಾರ್ ಕೂಡಿಗೆ ಮಹಮ್ಮದ್ ನಬಿ ಅವರು ಅನುಭವ ಹಂಚಿಕೊAಡರು. ಕಾರ್ಗಿಲ್‌ನಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕೂಡಿಗೆಯ ನಿವೃತ್ತ ಹವಾಲ್ದಾರ್ ಮಹಮ್ಮದ್ ನಬಿ ಅವರು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ತಾವು ಅನುಭವಿಸಿದ ಅನುಭವವನ್ನು ಹಂಚಿಕೊAಡರು. ಅಂದು ಯುದ್ಧಭೂಮಿಯಲ್ಲಿ ಕಠೋರವಾಗಿದ್ದ ಪರಿಸ್ಥಿತಿ ಹಾಗೂ ಘಟನೆಗಳು ಕಠಿಣವಾಗಿದ್ದವು ಎಂಬುದನ್ನು ವಿವರಿಸಿದರು.
ಯೋಧರ ಅನುಭವ ಕುರಿತು ಸ್ಕೌಟ್ಸ್,ಗೈಡ್ಸ್, ರೇಂಜರ್ ಮತ್ತು ರೋವರ್ಸ್ ತರಬೇತಿ ನಿರತ ಶಿಕ್ಷಕರು ಮತ್ತು ಉಪನ್ಯಾಸಕರು ಮಹಮ್ಮದ್ ನಬಿ ಅವರೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು.ರಂಜಿತ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ನಮ್ಮ ದೇಶದ ಸೈನಿಕರ ಶೌರ್ಯವನ್ನು ಪ್ರದರ್ಶಿಸುತ್ತದೆ ಎಂದರು.
ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ, ಜಿಲ್ಲಾ ಸ್ಕೌಟ್ಸ್, ಗೈಡ್ಸ್ನ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಸಹಾಯಕ ಆಯುಕ್ತರಾದ ಸಿ.ಎಂ.ಸುಲೋಚನಾ(ಗೈಡ್ಸ್), ಕೆ.ಬಿ.ಗಣೇಶ್(ಸ್ಕೌಟ್ಸ್), ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್.ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಇಂದಿರಾ ಮುತ್ತಣ್ಣ, ಖಜಾಂಚಿ ಎನ್.ಎಸ್. ನರೇಶ್ ಕುಮಾರ್ ಇದ್ದರು.