ಬೆಂಗಳೂರು, ಆ. ೬: ಸಚಿವ ಸ್ಥಾನ ಕೈ ತಪ್ಪಿದೆ, ನನಗೂ ಬೇಸರ ಇದೆ, ಸ್ಪೀಕರ್ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮನಸ್ಸಿನಲ್ಲಿ ಹಲವು ಲೆಕ್ಕಾಚಾರಗಳು ಇರುತ್ತವೆ. ನಾನು ಕೂಡ ಹಲವು ಲೆಕ್ಕಾಚಾರ ಮಾಡಿದ್ದೆ. ಕೊಡಗಿಗೆ ಕೊಟ್ಟಿಲ್ಲ, ಕೊಡವ ಜನಾಂಗಕ್ಕೆ ಕೊಟ್ಟಿಲ್ಲ. ೨೫ ವರ್ಷದಿಂದ ಕೊಡಗಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ವಿಶೇಷ ಸಮುದಾಯವನ್ನು ಯಾಕೆ ಗುರುತಿಸಲ್ಲ ಎಂದು ನಾವು ಲೆಕ್ಕಾಚಾರ ಹಾಕಬಹುದು. ಆದರೆ ರಾಜಕೀಯ ಲೆಕ್ಕಾಚಾರಗಳು ನಮ್ಮ ಮನಸ್ಸಿನಲ್ಲಿ ಇರುವಂತೆ ನಡೆಯಲ್ಲ. ಪಕ್ಷಕ್ಕೆ ತನ್ನದೇ ಆದ ವ್ಯವಸ್ಥೆ, ಪ್ರಕ್ರಿಯೆಗಳು ಇರುತ್ತವೆೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ನನಗೆ ಮಂತ್ರಿ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಅವರು ಖಂಡಿತವಾಗಿಯೂ ಅವರ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಹೇಳಿದ ತಕ್ಷಣ ಆಗಬೇಕೆಂದಿಲ್ಲ. ನಿರೀಕ್ಷೆ ಪ್ರಕಾರ ಆಗದಿದ್ದಾಗ ಬೇಸರ ಆಗುವುದು ಸಹಜ. ನನಗೂ ಬೇಸರ ಆಗಿದೆ. ಆಗಿಲ್ಲ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಅದನ್ನೆಲ್ಲಾ ಜೀರ್ಣಿಸಿಕೊಂಡು ನುಂಗಿ, ಪಕ್ಷವನ್ನು ಇನ್ನಷ್ಟು ಬಲವಾಗಿ ಕಟ್ಟಿ ೨೦೨೮ರಲ್ಲಿ ಮತ್ತೆ ಸರ್ಕಾರ ಬರುವಂತೆ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕತ್ವ ನನಗೆ ಯಾವುದೇ ಜವಾಬ್ದಾರಿ ನೀಡಿದರೂ, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.