ಮಡಿಕೇರಿ, ಆ. ೬: ಎಸ್‌ಡಿಪಿಐ ಮಡಿಕೇರಿ ನಗರ ಸಮಿತಿ ವತಿಯಿಂದ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ನಗರಸಭೆ ವಿರುದ್ಧ ಪ್ರತಿಭಟನೆ ನಡೆಯಿತು.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಅಲ್ಲದೆ ಬಹುತೇಕ ಎಲ್ಲಾ ರಸ್ತೆಗಳು ಗುಂಡಿಗಳಾಗಿ ಹಾಳಾಗಿವೆ. ಇದರೊಂದಿಗೆ ನಗರ ವ್ಯಾಪ್ತಿಯಲ್ಲಿ ಹಲವಾರು ಗಂಭೀರ ಸಮಸ್ಯೆಗಳಿದ್ದರೂ ನಗರಸಭೆ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ಮಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ, ನಗರಸಭಾ ಸದಸ್ಯ ಅಮಿನ್ ಮೊಯ್ಸಿನ್ ಮಾತನಾಡಿ, ನಗರಸಭೆ ಆಡಳಿತವು ಸಭೆಗಳಲ್ಲಿನ ತೀರ್ಮಾನಗಳನ್ನು ಜಾರಿ ಮಾಡದೆ ಕುಂಟುನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದು, ನಗರ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಮಾಡದೆ ವೈಮನಸ್ಸಿನ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು. ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಚರಂಡಿಗಳಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿವೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸುಬ್ರಹ್ಮಣ್ಯ ನಗರದಲ್ಲಿ ಬೀದಿ ನಾಯಿಗಳಿಗಾಗಿ ನಿರ್ಮಿಸಲಾಗಿರುವ ಪಂಜರ ಖಾಲಿ ಬಿದ್ದಿದೆ. ನಗರಸಭೆಯಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಇತ್ತೀಚೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತರು ನಗರಸಭೆಯ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದು, ನಗರಸಭೆ ಆಡಳಿತವೇ ಇದರ ಹೊಣೆ ಹೊರಬೇಕೆಂದು ಅಮಿನ್ ಮೊಯ್ಸಿನ್ ಹೇಳಿದರು.

ನಗರ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಅಧಿಕಾರದಿಂದ ಕೆಳಗಿಳಿಯಲಿ ಎಂದು ಆಗ್ರಹಿಸಿದ ಅಮಿನ್ ಮೊಯ್ಸಿನ್, ಆದಷ್ಟು ಶೀಘ್ರವಾಗಿ ಸಮಸ್ಯೆಗಳು ಪರಿಹಾರವಾಗದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಮೇರಿ ವೇಗಸ್, ಮನ್ಸೂರ್, ಪಕ್ಷದ ನಗರ ಅಧ್ಯಕ್ಷ ಮೊಹಮದ್ ಅಲಿ, ಉಪಾಧ್ಯಕ್ಷ ಮೈಕಲ್ ವೇಗಸ್, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ಮತ್ತಿತರರು ಇದ್ದರು.