ವೀರಾಜಪೇಟೆ, ಆ. ೫: ವೀರಾಜಪೇಟೆ ಕೊಡವ ಸಮಾಜದ ವಾರ್ಷಿಕ ಮಹಾಸಭೆಯು ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಂಘದ ಬೈಲಾ ತಿದ್ದುಪಡಿ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸದಸ್ಯರ ಒಪ್ಪಿಗೆ ಪಡೆಯಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಭಾರತ ಸರ್ಕಾರದ ಸಿಕ್ಲ್ ಬೋರ್ಡ್ ವಿಜ್ಞಾನಿ ಹಾಗು ಸಮಾಜದ ಸದಸ್ಯರಾದ ಕುಪ್ಪಚ್ಚಿರ ಭರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೊಡವ ಸಮುದಾಯದ ಮಕ್ಕಳು ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸುವುAತಾಗಬೇಕು ಎಂದರು. ಕೊಡವ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ೧೦ ಲಕ್ಷ ಅನುದಾನ ನೀಡಿದ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರನ್ನು ಮುಂದಿನ ದಿನಗಳಲ್ಲಿ ಶಾಸಕರನ್ನು ಸನ್ಮಾನಿಸುವ ಕುರಿತು ನಿರ್ಧರಿಸಲಾಯಿತು. ಮಂಡೋಡ ಕಾರ್ಯಪ್ಪ ದತ್ತಿನಿಧಿಯಿಂದ ತ್ರಿವೇಣಿ ಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಿಸÀಲಾಯಿತು ಹಾಗೂ ಪಟ್ರಪಂಡ ರತಿ ಮುತ್ತಣ್ಣ ದತ್ತಿನಿಧಿಯಿಂದ ವೀರಾಜಪೇಟೆ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಾಲ್ಕು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ಉಪಾಧ್ಯಕ್ಷ ಕಾಣತಂಡ ಜಗದೀಶ್ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.