ಮಡಿಕೇರಿ, ಆ.೫: ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಕಾರ್ಯನಿರ್ವಹಿಸಬೇಕು. ಅಗತ್ಯವಿದ್ದರೆ ಕಾಳಜಿ ಕೇಂದ್ರಗಳನ್ನು ಸಂಪೂರ್ಣ ಸಜ್ಜುಗೊಳಿಸಿ ಸಾರ್ವಜನಿಕರಿಗೆ ತಕ್ಷಣ ನೆರವು ಒದಗಿಸಬೇಕು. ಸಂಭವನೀಯ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರುವಂತೆ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಠಿ/ಬರ ಪರಿಸ್ಥಿತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಮಳೆ ಕಳೆದ ಒಂದು ವಾರದಿಂದ ಬಿರುಸು ಪಡೆದಿದ್ದರೂ, ಜಿಲ್ಲೆಯಲ್ಲಿ ಇನ್ನೂ ಶೇ.೩೭ರಷ್ಟು ಮಳೆ ಕೊರತೆ ಇದೆ. ವಾಸ್ತವ ಸ್ಥಿತಿಯ ವರದಿಯನ್ನು ಜಿಲ್ಲಾಡಳಿತದ ಮೂಲಕ ಕಂದಾಯ ಸಚಿವರಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ಕೊಡಗಿನಲ್ಲಿ ಉತ್ತಮ ಮಳೆಯಾದರೆ ಅರ್ಧ ಕರ್ನಾಟಕವೇ ಸುಭಿಕ್ಷವಾಗುತ್ತದೆ. ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ರಾಜ್ಯ ಸರ್ಕಾರದ ಮೂಲಕ ಹೆಚ್ಚುವರಿ ಅನುದಾನ ಕೋರಲಾಗುವುದು. ಎನ್‌ಡಿಆರ್‌ಎಫ್ ಮೂಲಕ ಹಣ ಕೋರಲು ಸಾಧ್ಯವಿಲ್ಲ. ಮಳೆಗಾಲಕ್ಕೂ ಮುನ್ನವೇ ಅಗತ್ಯ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿತ್ತು. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಸನ್ನದ್ಧವಾಗಿರಬೇಕು. ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುತ್ತಾ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.೩೭ರಷ್ಟು ಮಳೆ ಕೊರತೆಯಿದ್ದು, ಕಳೆದ ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ನಿಯಂತ್ರಣ ಕೊಠಡಿ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ೩೦ ಸದಸ್ಯರ ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದ್ದು, ೨೦ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ೧೦೯ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಸಹಯೋಗದಲ್ಲಿ ರಸ್ತೆಗೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದು, ಜಿಲ್ಲಾಡಳಿತದ ಬಳಿ ೩.೪ ಕೋಟಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಭತ್ತದ ಬೆಳೆಯುವ ಪ್ರದೇಶ ಸುಮಾರು ೩೦ ಸಾವಿರ ಹೆಕ್ಟೇರ್ ಕಡಿಮೆಯಾಗಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿ ಕೃಷಿ ಚಟುವಟಿಕೆ ಶೇ.೩೦ರಷ್ಟು ಕುಂಠಿತವಾಗಿದೆ ಎಂದು ತಿಳಿಸಿದರು.

ಮುಸುಕಿನ ಜೋಳ ಬಿತ್ತನೆ ಶೇ.೮೦ರಷ್ಟು ಪೂರ್ಣಗೊಂಡಿದ್ದು, ೨,೩೨೪ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಗೆ ೧,೮೦೦ ಕ್ವಿಂಟಾಲ್ ಪೂರೈಕೆಯಾಗಿದೆ. ೯೬ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಯಾವುದೇ ಕೊರತೆ ಇಲ್ಲ. ಬೆಳೆ ವಿಮೆ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ೬೫೩ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಶಿಧರ್ ಮಾತನಾಡಿ, ಕಾಫಿ ಹಾಗೂ ಕರಿಮೆಣಸು ಬೆಳೆಗಳಿಗೆ ಮಳೆ ಕೊರತೆ ತೀವ್ರ ಪರಿಣಾಮ ಬೀರಿದ್ದು, ಬೆಳೆಹಾನಿಗೆ ಸಂಬAಧಿಸಿದAತೆ ರೂ. ೪೦೩ ಕೋಟಿ ವಿಮೆ ಪರಿಹಾರಕ್ಕಾಗಿ ಕ್ಲೆöÊಮ್ ಸಲ್ಲಿಕೆಯಾಗಿದೆ ಎಂದರು.

ಮಳೆಹಾನಿ ಸಂಬAಧಿಸಿದAತೆ ೧೦ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಳೆಯಿಂದ ಕಾಮಗಾರಿ ವಿಳಂಬವಾಗಿದೆ. ೧,೧೦೦ ಕಿ.ಮೀ. ರಸ್ತೆ ನಿರ್ವಹಣೆಗೆ ರೂ. ೩೦ ಕೋಟಿ ಅಗತ್ಯವಿದ್ದರೂ, ರೂ. ೯ ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಮಂತರ್ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ರಸ್ತೆಗಳ ಗುಂಡಿಗಳನ್ನು ತಕ್ಷಣ ಮುಚ್ಚುವಂತೆ ಸೂಚಿಸಿದರು. ವೆಟ್‌ಮಿಕ್ಸ್ ಹಾಕದೆ, ಟೆಂಡರ್ ಪ್ರಕ್ರಿಯೆಯಲ್ಲಿಯೂ ವಿಳಂಬವಾಗಿರುವುದನ್ನು ಪ್ರಶ್ನಿಸಿದ ಅವರು, ಆಗಸ್ಟ್ ೧೫ರೊಳಗೆ ಕಾಂಕ್ರೀಟ್ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ನಿರ್ದೇಶಿಸಿದರು.

ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಮಾತನಾಡಿ, ಮಳೆಯಿಂದ ಹಾನಿಗೊಳಗಾದ ೨,೦೯೬ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ೯ ಟ್ರಾನ್ಸ್ಫಾರ್ಮರ್‌ಗಳನ್ನು ದುರಸ್ತಿ ಮಾಡಲಾಗಿದೆ. ಪ್ರತಿ ತಾಲೂಕಿಗೆ ೧೫೦ ವಿದ್ಯುತ್ ಕಂಬಗಳು ಹಾಗೂ ೭ ಗ್ಯಾಂಗ್‌ಮೆನ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಮಾತನಾಡಿ, ೩೧೩ ಶಾಲೆಗಳಲ್ಲಿ ಹೆಚ್ಚಿನ ದುರಸ್ತಿ ಅಗತ್ಯವಿದ್ದು, ಸುಮಾರು ೩೦೦ ಶಾಲೆಗಳಲ್ಲಿ ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ವಿವಿಧ ಅಧಿಕಾರಿಗಳು ಇದೇ ಸಂದರ್ಭ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನಗರಸಭೆ ಅಧ್ಯಕ್ಷೆ ಕಲಾವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.