ಸೋಮವಾರಪೇಟೆ, ಆ. ೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಹೆಸರಿನಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ಮೂಲಕ ನಿರ್ಮಿಸಲಾಗಿದ್ದ ಕುಡಿಯುವ ನೀರಿನ ಘಟಕ ಹಾಗೂ ಗಡಿಯಾರ ಕಂಬವನ್ನು ಪಟ್ಟಣ ಪಂಚಾಯಿತಿ ತೆರವುಗೊಳಿಸಿದ್ದು, ನೂತನ ಘಟಕಕ್ಕೆ ಈ ಈರ್ವರ ಹೆಸರನ್ನು ಇಡಬೇಕೆಂದು ಇಂದಿರಾಗಾAಧಿ ಅಭಿಮಾನಿಗಳ ಸಂಘ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಅವರು, ಕಳೆದ ೧೯೯೩ರಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ನಿರ್ಮಿಸಲಾಗಿದ್ದ ಕುಡಿಯುವ ನೀರಿನ ಘಟಕ ಹಾಗೂ ಗಡಿಯಾರ ಕಂಬವನ್ನು ನವೀಕರಿಸಲು ಹಲವಷ್ಟು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ ನಮಗೆ ಅವಕಾಶ ನೀಡಿರಲಿಲ್ಲ. ಇದೀಗ ಶಾಸಕ ಡಾ. ಮಂತರ್ ಗೌಡ ಅಭಿಮಾನಿಗಳ ಬಳಗದಿಂದ ಕುಡಿಯುವ ನೀರಿನ ಘಟಕ ನಿರ್ಮಿಸಲು ಪಂಚಾಯಿತಿಗೆ ಮನವಿ ಸಲ್ಲಿಕೆಯಾಗಿದ್ದು, ಪಂಚಾಯಿತಿಯವರು ನಮಗೆ ಮಾಹಿತಿ ನೀಡದೇ ಘಟಕವನ್ನು ತೆರವುಗೊಳಿಸಿದ್ದಾರೆ ಎಂದರು.

ನೂತನವಾಗಿ ನೀರಿನ ಘಟಕ ಸ್ಥಾಪಿಸಲು ನಮ್ಮ ಸಂಘದ ಅಭ್ಯಂತರವಿಲ್ಲ, ಆದರೆ ದಿ. ಗುಂಡೂರಾವ್ ಹಾಗೂ ಮೂಲ ನಿರ್ಮಾಣ ಇಂದಿರಾಗಾAಧಿ ಅಭಿಮಾನಿಗಳ ಸಂಘ ಎಂದು ಹೆಸರು ಹಾಕಬೇಕು ಎಂದು ನಾಗರಾಜ್ ಆಗ್ರಹಿಸಿದರು.

೧೯೯೩ರಲ್ಲಿ ಕೆಲವೇ ಕೆಲವು ದಾನಿಗಳು ಹಾಗೂ ಸಂಘಟನೆಯವರು ಕೂಲಿ ಕೆಲಸ ಮಾಡಿದ ಹಣದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದ್ದೆವು. ಶಾಲಾ ಕಾಲೇಜಿನ ಸಾವಿರಾರು ಮಕ್ಕಳು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಿರ್ವಹಣೆ ಕೊರತೆ ಎದುರಾಗಿತ್ತು. ಈ ಹಿನ್ನೆಲೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೂ ಪಂಚಾಯಿತಿ ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.

ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸೋಮವಾರಪೇಟೆ ತಾಲೂಕು ಮಾತ್ರವಲ್ಲದೇ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಕೊಡುಗೆಯನ್ನು ಜಿಲ್ಲೆಯ ಜನರು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಘಟಕಕ್ಕೆ ಗುಂಡೂರಾವ್ ಅವರ ಹೆಸರು ಹಾಗೂ ಮೂಲ ನಿರ್ಮಾಣ ಇಂದಿರಾಗಾAಧಿ ಅಭಿಮಾನಿಗಳ ಸಂಘ ಎಂಬ ಫಲಕ ಹಾಕಬೇಕು. ಘಟಕ ನಿರ್ಮಾಣ ಸಂದರ್ಭ ನಮ್ಮ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶಾಸಕರು ಈ ಬಗ್ಗೆ ಗಮನ ಹರಿಸಬೇಕೆಂದು ನಾಗರಾಜ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಂತೋಷ್, ಸಂಘಟನಾ ಕಾರ್ಯದರ್ಶಿ ಪ್ರವೀಣ್, ಮಂಜು, ಅಜಯ್ ಇದ್ದರು.