*ಗೋಣಿಕೊಪ್ಪ, ಆ. ೫: ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮಾಯಮುಡಿಯ ಆಪಟ್ಟಿರ ಬೇಬಿ ಉತ್ತಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಗಂಡಾನೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿದ್ಯುತ್ ಪ್ರವಹಿಸಿದ ಪರಿಣಾಮ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ತೋಟಕ್ಕೆ ನುಗ್ಗಿದ್ದ ಕಾಡಾನೆ ಎದುರಾದ ವಿದ್ಯುತ್ ಕಂಬವನ್ನು ತಳ್ಳಿದೆ. ಇದರಿಂದ ಕಂಬದ ಪಕ್ಕದಲ್ಲಿದ್ದ ಕಬ್ಬಿಣದ ಪೈಪ್ ವಿದ್ಯುತ್ ತಂತಿಗಳಿಗೆ ತಗುಲಿ, ವಿದ್ಯುತ್ ನೆಲಮಟ್ಟಕ್ಕೆ ಹರಿದಿದೆ. ಈ ವೇಳೆ ಆನೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಯ ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದ್ದು, ವನ್ಯಜೀವಿ ವೈದ್ಯಾಧಿಕಾರಿ ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು.
ಕಾಡಾನೆಯ ಸಾವಿಗೆ ನಿಖರ ಕಾರಣವನ್ನು ತನಿಖೆಯ ಬಳಿಕವೇ ದೃಢಪಡಿಸಲಾಗುವುದು. ಪ್ರಕರಣದ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಯುತ್ತಿದೆ ಎಂದು ಪೊನ್ನಂಪೇಟೆ ಪ್ರಬಾರ ವಲಯ ಅರಣ್ಯಾಧಿಕಾರಿ ರಾಕೇಶ್ ತಿಳಿಸಿದ್ದಾರೆ.