ವೀರಾಜಪೇಟೆ, ಆ.೫: ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಗರಾದ್ಯಂತ ಸಂಭ್ರಮದಿAದ ಆಚರಿಸಲಾಗುವ ಗೌರಿ-ಗಣೇಶೋತ್ಸವದ ಹಿನ್ನೆಲೆಯಲ್ಲಿ, ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಿನ ೨೨ ಉತ್ಸವ ಸಮಿತಿಗಳ ಸದಸ್ಯರನ್ನೊಳಗೊಂಡ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಅವರು, ಹಬ್ಬದ ಸಂಭ್ರಮದ ಹೆಸರಿನಲ್ಲಿ ‘ಡಿಜೆ’ ಸೌಂಡ್ ಹಾಗೂ ಮೋಜು-ಮಸ್ತಿಗೆ ಕಡಿವಾಣ ಹಾಕಿ, ಸಂಸ್ಕöÈತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಸಾಂಪ್ರದಾಯಿಕ ಆಚರಣೆಗೆ ಹೆಚ್ಚಿನ ಒತ್ತು ನೀಡಿ ಕಾನೂನನ್ನು ಪಾಲನೆ ಮಾಡಿ, ನಗರದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಶಾಂತಿ ಕದಡದಂತೆ ನೋಡಿಕೊಳ್ಳುವುದು ಸಮಿತಿಗಳ ಕರ್ತವ್ಯ ಎಂದು ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದರು.

ವೀರಾಜಪೇಟೆಯು ಸೌಹಾರ್ದತೆಗೆ ಹೆಸರಾದ ಪಟ್ಟಣ. ಇಲ್ಲಿ ಗೌರಿ-ಗಣೇಶೋತ್ಸವವು ಭಕ್ತಿ-ಶ್ರದ್ಧೆಯಿಂದ ನೆರವೇರಬೇಕು. ಪೊಲೀಸರು ಭದ್ರತೆಗೆ ಸದಾ ಸಿದ್ಧರಿದ್ದು, ಸಮಿತಿಯ ಪದಾಧಿಕಾರಿಗಳು ಇಲಾಖೆಯೊಂದಿಗೆ ಕೈಜೋಡಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ವೀರಾಜಪೇಟೆ ಪೋಲಿಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸಭೆಯಲ್ಲಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿದರು. ಪ್ರತಿಯೊಂದು ಉತ್ಸವ ಸಮಿತಿಯು ಪೆಂಡಾಲ್ ಹಾಕುವುದು, ವಿದ್ಯುತ್ ಸಂಪರ್ಕ ಪಡೆಯುವುದು ಹಾಗೂ ಮೆರವಣಿಗೆ ನಡೆಸಲು ಪೊಲೀಸ್ ಇಲಾಖೆ, ಚೆಸ್ಕಾಂ, ಪುರಸಭೆ ಮತ್ತು ತಾಲೂಕು ಆಡಳಿತದಿಂದ ಕಡ್ಡಾಯವಾಗಿ ಮುಂಚಿತವಾಗಿಯೇ ಅಧಿಕೃತ ಅನುಮತಿ ಪಡೆಯಬೇಕು. ಅಪಾಯಕಾರಿ ಸ್ಥಳಗಳಲ್ಲಿ ಹಾಗೂ ರಸ್ತೆ ಮಧ್ಯೆ ಸಾರ್ವಜನಿಕರಿಗೆ ತೊಂದರೆಯಾಗುವAತೆ ಭಾರಿ ಶಬ್ದದ ಪಟಾಕಿಗಳನ್ನು ಸಿಡಿಸುವಂತಿಲ್ಲ. ಪರಿಸರ ಸ್ನೇಹಿ ಹಾಗೂ ಹಸಿರು ಪಟಾಕಿಗಳಿಗೆ ಮಾತ್ರ ಆದ್ಯತೆ ನೀಡಬೇಕು. ಮಂಟಪಗಳ ಬಳಿ ಬೆಂಕಿ ನಂದಿಸುವ ಉಪಕರಣಗಳು ಮತ್ತು ನೀರಿನ ವ್ಯವಸ್ಥೆ ಕಡ್ಡಾಯವಾಗಿರಬೇಕು. ಧ್ವನಿವರ್ಧಕ ಹಾಗೂ ಡಿಜೆ ಬಳಕೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರತಿಯೊಬ್ಬರೂ ಅಕ್ಷರಶಃ ಪಾಲಿಸಬೇಕು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪಟಾಕಿ ಸಿಡಿಸುವ ವಿಚಾರದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕಡ್ಡಾಯವಾಗಿ ವಹಿಸಬೇಕು. ಆಚರಣೆ ವೇಳೆ ವೀರಾಜಪೇಟೆಯಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಅಥವಾ ಅಹಿತಕರ ಘಟನೆಗಳು ತಲೆದೋರದಂತೆ ನೋಡಿಕೊಳ್ಳುವುದು ಎಲ್ಲಾ ೨೨ ಉತ್ಸವ ಸಮಿತಿಗಳ ನೇರ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.

ಪೇಪರ್ ಬ್ಲಾಸ್ಟ್ ನಿಷೇಧ

ಇತ್ತೀಚೆಗೆ ಯುವಜನತೆ ರಸ್ತೆಗಳಲ್ಲಿ ‘ಪೇಪರ್ ಬ್ಲಾಸ್ಟ್’ ಬಳಸುವುದು ಹೆಚ್ಚಾಗಿದ್ದು, ಇದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತದೆ. ಆದ್ದರಿಂದ ಮೆರವಣಿಗೆ ವೇಳೆ ಪೇಪರ್ ಬ್ಲಾಸ್ಟ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸ್ವಯಂಸೇವಕರ ನೇಮಕ ಹಾಗೂ ಸಿಸಿಟಿವಿ ಕಾವಲು

ಪ್ರತಿ ಗಣಪತಿ ಮಂಟಪ ಹಾಗೂ ಮೆರವಣಿಗೆಯ ಉಸ್ತುವಾರಿಗೆ ಉತ್ಸವ ಸಮಿತಿಯಿಂದ ಗುರುತಿನ ಚೀಟಿ ನೀಡಿ ಸ್ವಯಂಸೇವಕರನ್ನು ನೇಮಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಮಂಟಪಗಳ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು ಕಡ್ಡಾಯ.

ಟ್ಯಾಬ್ಲೋ (ಸ್ತಬ್ಧಚಿತ್ರ) ಗಾತ್ರ ಕಡಿತ ಹಾಗೂ ಸುರಕ್ಷತೆ

ವೀರಾಜಪೇಟೆ ಪಟ್ಟಣದ ರಸ್ತೆಗಳು ಅತ್ಯಂತ ಕಿರಿದಾಗಿರುವುದರಿಂದ ಮೆರವಣಿಗೆ ಸಮಯದಲ್ಲಿ ತೊಂದರೆಯಾಗದAತೆ ಟ್ಯಾಬ್ಲೋಗಳ (ಸ್ತಬ್ಧಚಿತ್ರಗಳ) ಗಾತ್ರವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ವಿದ್ಯುತ್ ತಂತಿಗಳು ಹಾಗೂ ರಸ್ತೆಯ ಇಕ್ಕೆಲಗಳ ಆಸ್ತಿಪಾಸ್ತಿಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಯಿತು.

ಉತ್ಸವ ಸಮಿತಿಗಳ ಜವಾಬ್ದಾರಿ

ಒಟ್ಟಾರೆಯಾಗಿ, ಯಾವುದೇ ಅಡೆತಡೆಗಳಿಲ್ಲದೆ, ವೀರಾಜಪೇಟೆಯ ಸೌಹಾರ್ದ ಪರಂಪರೆಗೆ ಧಕ್ಕೆಯಾಗದಂತೆ ಶಾಂತಿಯುತ ಹಾಗೂ ವೈಭವಯುತ ಗೌರಿ-ಗಣೇಶೋತ್ಸವ ಆಚರಿಸಲು ಪೊಲೀಸ್ ಇಲಾಖೆ ಉತ್ಸವ ಸಮಿತಿಗಳಿಗೆ ಸಭೆಯಲ್ಲಿ ತಿಳಿಸಿತು.

ಸಭೆಯಲ್ಲಿ ಪುಷ್ಪರಾಜ್, ಆನಂದ್ ರಾಜಪ್ಪ, ಉಣ್ಣಿ, ಚೇತನ್ ಸೇರಿದಂತೆ ಇತರರು ಮಾತನಾಡಿದರು.

ಸಭೆಯಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್, ಗ್ರಾಮಾಂತರ ಠಾಣಾಧಿಕಾರಿ ಲತಾ, ಅಪರಾಧ ವಿಭಾಗದ ಠಾಣಾಧಿಕಾರಿ ಕಾವೇರಪ್ಪ, ಪೋಲಿಸ್ ಇಲಾಖೆ ಸಿಬ್ಬಂದಿಗಳು, ೨೨ ಗಣೇಶ ಉತ್ಸವ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.