ಕುಶಾಲನಗರ, ಕೂಡಿಗೆ, ಆ.೫; ಕಾವೇರಿಯ ಅನುಗ್ರಹದೊಂದಿಗೆ ಉತ್ತಮ ಮಳೆಯಾದಲ್ಲಿ ಎರಡು ರಾಜ್ಯಗಳ ನೀರಿನ ವಿವಾದ ಶಮನಗೊಳ್ಳಲಿದೆ. ಕಾವೇರಿ ಮುನಿಸಿಕೊಂಡರೆ ನಾಡಿನ ಜನರಿಗೆ ಅನ್ನ ಆಹಾರಕ್ಕೆ ಆಪತ್ತು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ನಾಡಿನ ಕ್ಷೇಮಕ್ಕಾಗಿ ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಬೇಕಾಗಿದೆ ಎಂದು ರಾಜ್ಯ ಸಂಪುಟ ದರ್ಜೆ ಸಚಿವ ಪಿ. ಎಂ. ನರೇಂದ್ರಸ್ವಾಮಿ ಅಭಿಪ್ರಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ ಕ್ಷೇತ್ರದ ಶಾಸಕರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಕ್ಷೇತ್ರ ಶಾಸಕರಾದ ಡಾ. ಮಂತರ್ ಗೌಡ ಮತ್ತು ಜಿಲ್ಲಾಧಿಕಾರಿಗಳು, ಅಣೆಕಟ್ಟು ಅಧಿಕಾರಿಗಳೊಂದಿಗೆ ಮಳೆ ಮತ್ತು ಬರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ತಾನು ಕಾವೇರಿ ಪಾತ್ರದ ಮಂಡ್ಯ ಜಿಲ್ಲೆಯವನಾದ ಕಾರಣ ತನಗೆ ಕಾವೇರಿ ಜಲಾನಯನ ಪ್ರದೇಶದ ಸಂಪೂರ್ಣ ಪರಿಸ್ಥಿತಿಯ ಅರಿವಿದೆ ಎಂದ ಸಚಿವರು, ಮೂಲ ಕಾವೇರಿಯಲ್ಲಿ ಮಳೆಗಾಲದಲ್ಲಿ ನದಿ ತುಂಬಿ ಹರಿದು ಜನರು ಸಂಕಷ್ಟಕ್ಕೆ ಈಡಾಗುವುದರೊಂದಿಗೆ ರಾಜ್ಯ ಹಾಗೂ ನೆರೆ ರಾಜ್ಯಗಳ ಕೃಷಿಕರನ್ನು ಸಂತಸ ಪಡಿಸುತ್ತಿರುವ ಜಿಲ್ಲೆಯ ಜನತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ ಸ್ಥಳೀಯ ಕ್ಷೇತ್ರ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ತದನಂತರ ಸಮಗ್ರ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಕೃಷಿ ಕ್ಷೇತ್ರಕ್ಕೆ ಭೇಟಿ
ನಂತರ ಸಚಿವರು ಶಾಸಕರು ಹಾರಂಗಿ ಸಮೀಪದಲ್ಲಿರುವ ಪ್ರಮೋದ್ ಎಂಬುವರ ಕಾಳುಮೆಣಸು ತೋಟಕ್ಕೆ ಭೇಟಿ ನೀಡಿ ಮಳೆ ಪ್ರಮಾಣ ಕಡಿಮೆ ಯಾದ ಹಿನ್ನೆಲೆಯಲ್ಲಿ ಕಾಳು ಮೆಣಸು ಬಳ್ಳಿಯಲ್ಲಿ ಈ ಸಾಲಿನಲ್ಲಿ ಮೆಣಸು ಕಾಳು ಕಟ್ಟದಿರುವುದು, ಹೂ ಬಿಡದಿರುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ತೋಟದ ವೀಕ್ಷಣೆಯ ಸಂದರ್ಭದಲ್ಲಿ ತಿಳಿಸಿದರು.
ಬಳಿಕ ಹುದುಗೂರು ವ್ಯಾಪ್ತಿಯಲ್ಲಿ ಈಗಾಗಲೇ ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿರುವ ಪ್ರದೇಶಗಳಲ್ಲಿ ಕಡಿಮೆ ಮಳೆಯ ಪ್ರಮಾಣ ಮತ್ತು ಮುಖ್ಯ ನಾಲೆಯಲ್ಲಿ ನೀರು ಹರಿಸದೆ ಇರುವುದರಿಂದಾಗಿ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೆ ಇರುವ ಕೃಷಿ ಭೂಮಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಮೆಕ್ಕೆಜೋಳದ ಬೆಳೆಯು ಬಿಳಿ ಸುಳಿ ರೋಗದಿಂದ ಹಾಳಾಗಿರುವ ಸ್ಧಳಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೂಡಿಗೆ ಸಮೀಪದಲ್ಲಿರುವ ಹೆಗ್ಗಡಹಳ್ಳಿ ಗ್ರಾಮದ ದಿವಾಕರ್, ಯೋಗೇಶ್ ಎಂಬವವರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.
- ಚಂದ್ರಮೋಹನ್, ನಾಗರಾಜಶೆಟ್ಟಿ