ನಾಪೋಕ್ಲು, ಆ. ೪ : ಮದೆ ಗ್ರಾಮದಲ್ಲಿ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಮದೆನಾಡು ಗ್ರಾಮದ ನಿವಾಸಿ, ಮಾಜಿ ಸೈನಿಕ ಬಸಪ್ಪ ಹಾಗೂ ನವಿಲಾಕ್ಷಿ ದಂಪತಿಯ ಪುತ್ರ ರಘು ಬಸಪ್ಪ ೨೬ ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತನ್ನ ಗ್ರಾಮಕ್ಕೆ ಆಗಮಿಸಿದ ಸಂದರ್ಭ ಕುಟುಂಬಸ್ಥರು, ಮಾಜಿ ಸೈನಿಕರು, ಊರಿನವರು ಯೋಧನನ್ನು ಮದೆ ಹೈಸ್ಕೂಲಿನಿಂದ ಮದೆ ಪೇಟೆಯವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಮದೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಎಲ್ಲರೂ ಸೇರಿ ಗ್ರಾಮದ ಕುವರ ರಘು ಬಸಪ್ಪ ಹಾಗೂ ಅವರ ಪತ್ನಿ ದೀನಾ ಅವರನ್ನು ಜಯಕಾರ ಘೋಷಣೆಗಳೊಂದಿಗೆ ಸ್ವಾಗತಿಸಿ, ಪುಷ್ಪ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಈ ಸಂದರ್ಭ ಮದೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ್ ಅಗೋಳಿಕಜೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ, ಗಣರಾಜ್, ನಿವೃತ್ತ ಸೇನಾನಿಗಳು, ಕುಟುಂಬಸ್ಥರು ಹಾಗೂ ಊರಿನವರು ಉಪಸ್ಥಿತರಿದ್ದು ಶುಭ ಹಾರೈಸಿದರು.