ಕುಶಾಲನಗರ, ಆ. ೪: ಕೊಡಗಿನ ತವರು ನೆಲೆಯಲ್ಲಿ ಸುರಿದ ಮಳೆಯಿಂದ ತುಂಬಿದ ಕಾವೇರಿ ತಮಿಳುನಾಡಿನ ಭಾಗದ ವ್ಯಾಪ್ತಿಯ ನದಿಯಲ್ಲಿ ಹರಿದು ಸಾಗುತ್ತಿದ್ದ ಸಂದರ್ಭ ಅಲ್ಲಿನ ಜನತೆ ಅಮ್ಮನನ್ನು ಭಕ್ತಿ ಪೂರ್ವಕವಾಗಿ ಪ್ರೀತಿಯ ಸೆಲೆಯೊಂದಿಗೆ ಬರಮಾಡಿಕೊಂಡ ಕ್ಷಣಗಳು ಮನ ಮಿಡಿಯುವಂತಹ ಭಾವನಾತ್ಮಕ ದೃಶ್ಯಗಳು ಎಲ್ಲೆಡೆ ನದಿ ಕಲುಷಿತಗೊಳಿಸುತ್ತಿರುವ ಮಂದಿಗೆ ಮಾದರಿ ಅಂದರೆ ತಪ್ಪಾಗಲಾರದು. ವಾರ್ಷಿಕವಾಗಿ ಮೂರು ಬೆಳೆಗಳನ್ನು ಬೆಳೆಯುವ ತಮಿಳುನಾಡಿನ ಭಾಗದ ಜನತೆ ಮೂಲ ಕಾವೇರಿಯಲ್ಲಿ ಮಳೆ ಸುರಿಯೋದನ್ನೇ ಕಾತರದಿಂದ ಕಾಯುತ್ತಿರುವುದು ಸಾಮಾನ್ಯ ಸಂಗತಿ.
ಕೋಟ್ಯAತರ ಜನ ಜಾನುವಾರುಗಳಿಗೆ ಜೀವನದಿ ಎನಿಸಿರುವ ಕಾವೇರಿ ಕೊಡಗು ಜಿಲ್ಲೆಯಲ್ಲಿ ಹುಟ್ಟಿ ತುಂಬಿ ಹರಿದು ನಂತರ ಕನ್ನಂಬಾಡಿ ಅಣೆಕಟ್ಟು ದಾಟಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಸೇರುತ್ತದೆ.
ತದನಂತರ ತಮಿಳುನಾಡಿನಲ್ಲಿ ಕಾವೇರಿ ನದಿಗೆ ೧೯೩೧ರಲ್ಲಿ ನಿರ್ಮಿಸಿರುವ ಅಣೆಕಟ್ಟು ಕಲ್ಲಣೈ ಗ್ರಾಂಡ್ ಅಣೆಕಟ್ಟಿನಲ್ಲಿ ಸಂಗ್ರಹವಾಗಿ ಬಹುತೇಕ ಭಾಗಗಳ ಕೃಷಿ ಚಟುವಟಿಕೆಗಳಿಗೆ ಹರಿಸಲಾಗುತ್ತದೆ.
ಈ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದಲ್ಲಿ ನೀರಿನ ಹರಿವು ಕಂಡುಬರುವುದು ಬಹುತೇಕ ಅಪರೂಪ ಎನ್ನುತ್ತಾರೆ ಅಲ್ಲಿನ ಜನತೆ. ಯಥೇಚ್ಛವಾಗಿ ಕಾವೇರಿ ಮೂಲ ಕೊಡಗಿನಲ್ಲಿ ಮಳೆ ಸುರಿದರೆ ಆ ದಿನಗಳಲ್ಲಿ ಈ ಭಾಗದ ನದಿ ಪಾತ್ರಗಳಲ್ಲಿ ನೀರು ಹರಿಯುವುದನ್ನು ಕಂಡಾಗ ಅಲ್ಲಿನ ಜನತೆ ಕಾವೇರಮ್ಮನನ್ನು ಭಾವನಾತ್ಮಕವಾಗಿ ಬರಮಾಡಿಕೊಳ್ಳುತ್ತಾರೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿರುವ ಸಂದರ್ಭ ಅಲ್ಲಿನ ಜನರು ಮನೆಯಿಂದ ಹೊರ ಬಂದು ನದಿ ಪಾತ್ರದಲ್ಲಿ ಕಾದು ನಿಂತು ಸಾಮೂಹಿಕವಾಗಿ ಹರ್ಷೋದ್ಗಾರಗಳೊಂದಿಗೆ ಕಾವೇರಮ್ಮನನ್ನು ಭಾವನಾತ್ಮಕವಾಗಿ ಬರಮಾಡಿಕೊಂಡ ದೃಶ್ಯ ನೋಡುಗರಿಗೆ ಅಚ್ಚರಿ ಮೂಡಿಸುವಂತಿತ್ತು.
ಮೂಲ ಕಾವೇರಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬಿದ್ದರೆ ಮಾತ್ರ ಆ ಭಾಗದ ನದಿ ಪಾತ್ರಕ್ಕೆ ಹೆಚ್ಚುವರಿ ನೀರು ಹರಿದು ನದಿಯಲ್ಲಿ ನೀರಿನ ಹರಿವಿನ ವೇಳೆಗೆ ಅಲ್ಲಿನ ಭಾಗದ ರೈತರು ನಾಗರಿಕರು ಕಾವೇರಿಯನ್ನು ತಮ್ಮ *ಅಮ್ಮ* ಬಂದರು.. ಅನ್ನುವಷ್ಟರ ಮಟ್ಟಿಗೆ ನದಿಯ ಸೆಲೆಯನ್ನು ಆರಾಧಿಸಿ ಬರಮಾಡಿಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ ಎನ್ನುತ್ತಾರೆ ಅಣೈ ಕಾವೇರಿ ರಿವರ್ ಟ್ರಸ್ಟ್ ಸಂಚಾಲಕರಾದ ವಾಸು ರಾಮಚಂದ್ರನ್.
ಮೂಲ ಕಾವೇರಿಯಲ್ಲಿ ವಾಡಿಕೆಯ ಪ್ರಮಾಣದ ಮಳೆ ಬೀಳಲಿ ಎಂದು ಅಲ್ಲಿನ ಜನತೆ ನಿರಂತರ ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ.
ತಿರುಚ್ಚಿ ತಂಜಾವೂರು ಕುಂಭಕೋಣA ವ್ಯಾಪ್ತಿಯ ಜನರು ಕಾವೇರಿಯನ್ನು ಅಮ್ಮ ಎಂದೇ ಕರೆಯುತ್ತಾರೆ.
ನದಿಯಲ್ಲಿ ನೀರಿನ ಅಭಾವ ಕಂಡು ಬಂದಾಗ ಕೊಳವೆ ಬಾವಿಯಿಂದ ಬತ್ತಿ ಹೋದ ನದಿಗೆ ಕೊಳವೆಬಾವಿಯಿಂದ ನೀರು ಹಾಯಿಸಿ ವಿಶೇಷ ಪರ್ಜನ್ಯ ಜಪ ಪೂಜೆ ಸಲ್ಲಿಸುವ ಮೂಲಕ ವರ್ಷದ ಎಲ್ಲಾ ದಿನಗಳ ಕಾಲ ನದಿಯಲ್ಲಿ ನೀರು ಹರಿಯುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ.
ನದಿಯಲ್ಲಿ ನೀರು ಹರಿಯಲು ಆರಂಭಿಸಿದಾಗ ಅಲ್ಲಿನ ಜನರು ಪ್ರತ್ಯಕ್ಷ ಕಾವೇರಮ್ಮ ಬಂದರು ಎನ್ನುವ ಮೂಲಕ ರಾಜ ಮರ್ಯಾದೆಯೊಂದಿಗೆ ಆರತಿ ಬೆಳಗಿ ಪೂಜಿಸಿ ಬರಮಾಡಿಕೊಳ್ಳುತ್ತಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಗಮನಿಸಬಹುದು.
ನದಿ ತಟದ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಕಾವೇರಮ್ಮನ ಕಂಡಾಗ ತಮ್ಮ ತಾಯಿಯನ್ನು ಕಂಡಷ್ಟು ಸಂತಸ, ವ್ಯಕ್ತಪಡಿಸುತ್ತಿರುವುದು ಜೀವನದಿ ಕಾವೇರಿಯ ಮೇಲೆ ಆ ಭಾಗದ ಜನರಿಗೆ ಇರುವ ಕಾಳಜಿ ಹಾಗೂ ನದಿಯ ನಡುವೆ ಇರುವ ಭಾವನಾತ್ಮಕ ಸಂಬAಧವನ್ನು ವ್ಯಕ್ತಪಡಿಸುತ್ತಾರೆ. ಭೂಮಿ,ನದಿ ತೊರೆಗಳು ಭೋಗದ ವಸ್ತು ಅಲ್ಲ. ಅವುಗಳನ್ನು ತಾಯಿಯಂತೆ ಆರಾಧಿಸಬೇಕು. ತಾಯಿ ನಮ್ಮನ್ನು ಕಾಪಾಡುತ್ತಾಳೆ ಎನ್ನುವ ನಂಬಿಕೆ ಹೊಂದಿರುವ ತಮಿಳುನಾಡಿನ ಈ ಜನ ತಲಕಾವೇರಿ ಕ್ಷೇತ್ರದಿಂದ ಸಮುದ್ರಸಂಗಮ ತನಕದ ಪೂಂಪ್ ಹಾರ್ ಕಾವೇರಿ ನದಿ ಪಾತ್ರದ ಪ್ರತಿಯೊಬ್ಬ ನಾಗರಿಕರಿಗೂ ಪ್ರತಿ ಹನಿ ನೀರಿನ ಮೌಲ್ಯದ ಅರಿವು ಮೂಡಿಸುವಲ್ಲಿ ಮಾದರಿಯಾಗಿದ್ದಾರೆ.
-ಚಂದ್ರಮೋಹನ್