ನಾಪೋಕ್ಲು, ಆ. ೩: ಅಕ್ಕ ಪಡೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು.
ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಪಾರಾಣೆ (ಬಲಮರಿ) ಮತ್ತು ಬೊಳ್ಳುಮಾಡು, ಮಾರುತಿ ಸ್ಕೂಲ್ ಮೂರ್ನಾಡು ಮಕ್ಕಳಿಗೆ ಮೌಲ್ಯ ಶಿಕ್ಷಣದ ಮಹತ್ವ, ಪರಿಸರ ಜಾಗೃತಿ, ನೈರ್ಮಲ್ಯ ಸ್ವಚ್ಛತೆ ಮತ್ತು ಸುರಕ್ಷತೆಗಳ ಬಗ್ಗೆ ಜಾಗೃತಿ, ದೈಹಿಕ ಶಿಕ್ಷಣದ ಮಹತ್ವ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಕಡ್ಡಾಯ ಶಿಕ್ಷಣ, ನಿರಂತರ ಹಾಜರಾತಿ, ಶಿಕ್ಷಣ ವಂಚಿತ ಮಕ್ಕಳಿದ್ದರೆ ಅವರ ಮಾಹಿತಿ ಕೋರಿ ಅರಿವು ಮೂಡಿಸಲಾಯಿತು.
ಮಕ್ಕಳಿಗೆ ಪೋಕ್ಸೊ ಕಾಯ್ದೆಯ ಅರಿವು, ಮಕ್ಕಳ ಸಹಾಯವಾಣಿ ೧೦೯೮, ಸೈಬರ್ ಸಹಾಯವಾಣಿ ೧೯೩೦, ಮಹಿಳಾ ಸಹಾಯವಾಣಿ ೧೮೧, ಪೊಲೀಸ್ ಸಹಾಯವಾಣಿ ೧೧೨ ಸಂಖ್ಯೆಗಳಿಗೆ ಮಾಹಿತಿಗೆ ಸಂಪರ್ಕಿಸಬಹುದು ಎಂಬ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಪೊಲೀಸ್ ಮತ್ತು ಮಹಿಳಾ ಮಕ್ಕಳ ಸಬಲೀಕರಣ ಇಲಾಖೆಯ ಅಧೀನದಲ್ಲಿ ಬರುವ ಅಕ್ಕ ಪಡೆ ಸಿಬ್ಬಂದಿಗಳಾದ ಕೌಶಲ್ಯ, ಕುಮಾರಿ ಮತ್ತು ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು