ಸಹೋದರಿಯರ ದಿನವು ಕುಟುಂಬದ ಅಮೂಲ್ಯ ಭಾಂದವ್ಯವನ್ನು ಸ್ಮರಿಸುವ ವಿಶೇಷ ದಿನವಾಗಿದೆ. ಸಹೋದರಿ ಎಂಬ ಪದವೇ ಸುಂದರ. ಬಾಲ್ಯದಿಂದಲೇ ಬರುವ ಈ ಆತ್ಮೀಯತೆ ಜೀವನದ ಎಲ್ಲಾ ಹಂತಗಳಲ್ಲೂ ನಮ್ಮೊಂದಿಗೆ ಇರುತ್ತದೆ. ಎಷ್ಟೇ ಕಿತ್ತಾಡಿದರೂ, ಮುನಿಸಿದ್ದರೂ ಎಲ್ಲಾ ಕ್ಷಣದಲ್ಲೇ ಮರೆತು ಒಂದಾಗಿ ಸಾಗುವ ಮಧುರ ಬಾಂಧವ್ಯ. ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವು ದರಿಂದ ಹಿಡಿದು ಕಷ್ಟದ ಸಮಯದಲ್ಲಿ ಧೈರ್ಯ ತುಂಬುವವರೆಗೂ ಸಹೋದರಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಯಾವುದೇ ಒಂದು ಸಂಬAಧವನ್ನು ಪಡೆದುಕೊಳ್ಳಲು ಅದೃಷ್ಟವಿರಬೇಕಂತೆ ನನಗೆ ಇಬ್ಬರು ಸಹೋದರಿಯರು, ದೊಡ್ಡವಳಿಗೂ ನನಗೂ ಮೂರು ವರ್ಷದ ಅಂತರವಷ್ಟೇ ಅವಳು ಬಾಲ್ಯದಲ್ಲಿ ನನ್ನ ತುಂಟಾಟದ ಪಾಲುದಾರಳಾಗಿ, ಬೆಳೆದಂತೆ ಸ್ನೇಹಿತೆಯಾಗಿ ನನ್ನ ಬೆಂಬಲವಾಗಿ ನಿಂತವಳು...... ಚಿಕ್ಕ ತಂಗಿಗೂ ನನಗೂ ಬಹಳ ವಯಸ್ಸಿನ ಅಂತರವಿತ್ತು ತಂಗಿ ಅನ್ನೋದಕ್ಕಿಂತ ಮಗಳಾಗಿದ್ದಳು ಅವಳ ಬಾಲ್ಯದ ಹಠ, ಕೋಪ ಸಹಿಸಿಕೊಂಡು ಅವಳೊಂದಿಗೆ ಕಳೆದ ದಿನಗಳೇ ಮತ್ತೊಂದು ರೀತಿಯ ಅನುಭವ...... ಕೊನೆಯ ಮಕ್ಕಳಾದ ತಮ್ಮ - ತಂಗಿಯ ಗಲಾಟೆ, ಕಿತ್ತಾಟದಲ್ಲಿ ದೊಡ್ಡಕ್ಕನಾದ ನನಗೆ ಅಮ್ಮನಿಂದ ತಿಂದ ಪೆಟ್ಟುಗಳೇ ಉಡುಗೊರೆ.
ಆ ದಿನಗಳ ನೆನೆದಾಗ ಈಗಲೂ ಮೊಗದಲ್ಲಿ ಗೊತ್ತಿಲ್ಲದೆ ನಗುವರಳುತ್ತದೆ. ರಕ್ತ ಸಂಬAಧದಲ್ಲಿ ದೊರೆತ ಉತ್ತಮ ಸ್ನೇಹಿತೆಯರು ನನ್ನ ಪ್ರೀತಿಯ ಸಹೋದರಿಯರು. ಸಹೋದರಿಯರ ನಡುವಿನ ಜೀವಮಾನದ ಪ್ರೀತಿಯನ್ನು ಸ್ಮರಿಸಲು ಆಚರಿಸುವ ದಿನವೇ ಈ ಅಂತಾರಾಷ್ಟ್ರೀಯ ಸಹೋದರಿಯರ ದಿನ. ಇಂದಿನ ಬಿಡುವಿಲ್ಲದ, ಒತ್ತಡದ ಜೀವನದಲ್ಲಿ ಇಂತಹ ದಿನಗಳ ಆಚರಣೆ ಖಂಡಿತ ಅವಶ್ಯಕತೆಯಿದೆ. ತಮ್ಮ ಜೀವನದ ಮಧುರ ಕ್ಷಣಗಳನ್ನು ಮೆಲುಕುಹಾಕಲು ಬಾಂಧವ್ಯವನ್ನು ಗಟ್ಟಿಗೊಳಿಸಲು ಒಂದು ಉತ್ತಮ ಆಚರಣೆ ಪ್ರತಿಯೊಬ್ಬರೂ ತಮ್ಮ ಸಹೋದರಿಯರನ್ನು ಗೌರವಿಸಿ, ಪ್ರೀತಿಯಿಂದ ಅವರ ಕನಸುಗಳಿಗೆ ಬೆಂಬಲ ನೀಡೋಣ ಇದು ಕೇವಲ ಒಂದು ಆಚರಣೆಯಲ್ಲ ಕುಟುಂಬದ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಒಂದು ಸುಂದರ ಸಂದರ್ಭವಾಗಿದೆ.... ಸಮಸ್ತ ಸಹೋದರಿಯರಿಗೆ, ಸಹೋದರಿಯರ ದಿನದ ಶುಭಾಶಯಗಳು..
- ಶ್ವೇತಾ ಮಂಜುನಾಥ್ ಚಿರಕನಹಳ್ಳಿ
ವಿಶೇಷ ಶಿಕ್ಷಕಿ, ಸುಂಟಿಕೊಪ್ಪ
ಮೊ : ೬೩೬೩೧೧೩೯೪೬