ಮಡಿಕೇರಿ, ಆ. ೧: ಮಾದಕ ವ್ಯಸನ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನತೆ ಜಾಗೃತರಾದರೆ ಮಾತ್ರ ಸಮಾಜದಿಂದ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಹೇಳಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶನಿವಾರ ಎಫ್‌ಎಂಸಿ ಕಾಲೇಜಿನ ಸಭಾಂಗಣದಲ್ಲಿ ಡಾ. ಮಹಾಂತ ಶಿವಯೋಗಿ ಅವರ ಜನ್ಮದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರು ಡ್ರಗ್ಸ್, ಹೆರಾಯಿನ್, ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳಿಗೆ ಬಲಿಯಾಗದೆ ಶಿಕ್ಷಣ ಹಾಗೂ ಉತ್ತಮ ಬದುಕಿನತ್ತ ಗಮನಹರಿಸಬೇಕು. ಮಾದಕ ವ್ಯಸನವು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಡೆಸುತ್ತಿರುವ “ಡ್ರಗ್ಸ್ ಬೇಡ ಬ್ರೋ” ಅಭಿಯಾನದಡಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಮಾದಕ ವಸ್ತು ಮಾರಾಟಗಾರರ ಬಗ್ಗೆ ಕೆಎಸ್‌ಪಿ ಆ್ಯಪ್ ಡ್ರಗ್ಸ್ ಫ್ರೀ ಕರ್ನಾಟಕ ಆ್ಯಪ್ ಅಥವಾ ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥ ಡಾ. ರೂಪೇಶ್ ಗೋಪಾಲ್ ಮಾತನಾಡಿ, ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯದ ಜೊತೆಗೆ ಕುಟುಂಬದ ನೆಮ್ಮದಿಯನ್ನೂ ಹಾಳುಮಾಡುತ್ತದೆ. ಮಾನಸಿಕ ಅಸ್ವಸ್ಥತೆ, ಆರ್ಥಿಕ ಸಂಕಷ್ಟ ಹಾಗೂ ಆತ್ಮಹತ್ಯೆಯಂತಹ ಗಂಭೀರ ಪರಿಣಾಮಗಳಿಗೆ ಇದು ಕಾರಣವಾಗಬಹುದು ಎಂದು ಹೇಳಿದರು. ವ್ಯಸನಕ್ಕೆ ಒಳಗಾದವರನ್ನು ಜಿಲ್ಲಾಸ್ಪತ್ರೆಯ ಮನೋರೋಗ ವಿಭಾಗಕ್ಕೆ ಕರೆತಂದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ ಮಾತನಾಡಿ, ಕಾಲೇಜು ಜೀವನವು ಭವಿಷ್ಯ ರೂಪಿಸುವ ಮಹತ್ವದ ಹಂತವಾಗಿದ್ದು, ಉತ್ತಮ ಸ್ನೇಹಿತರ ಆಯ್ಕೆ ಹಾಗೂ ಶಿಸ್ತುಬದ್ಧ ಜೀವನದಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಹೇಳಿದರು.

ಡಿವೈಎಸ್‌ಪಿ ಸೂರಜ್ ಮಾತನಾಡಿ, ಯುವಜನರು ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿ ಪೊಲೀಸ್ ಇಲಾಖೆಯ ಮೊಬೈಲ್ ಆ್ಯಪ್‌ಗಳ ಮೂಲಕ ಪೆಡ್ಲರ್‌ಗಳ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಅವರು ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಮನೋರೋಗ ವಿಭಾಗದ ವೈದ್ಯರು ಹಾಗೂ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೇಣುಶ್ರೀ, ಉಪನ್ಯಾಸಕರುಗಳಾದ ಪ್ರೊ.ಶ್ರೀಧರ್ ಹೆಗಡೆ, ಡಾ.ಗಾಯತ್ರಿ ಎ.ಎನ್, ಡಾ.ತಳವಾರ್ ಡಿ.ಹೆಚ್., ಡಾ.ಶೈಲಶ್ರೀ, ಕೆ.ಎಂ.ಪೂಣಚ್ಚ, ಅಲೋಕ್ ಹಾಗೂ ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳು, ಮನೋರೋಗ ವಿಭಾಗದ ವೈದ್ಯಾಧಿಕಾರಿಗಳು ಇದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಲೋಚನ, ಗಾನ ನಿರೂಪಿಸಿದರು, ಸ್ವಪ್ನ, ಚೊಂದಮ್ಮ, ಲಿಖಿತ ನಾಡಗೀತೆ ಹಾಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.