ಮಡಿಕೇರಿ, ಜು. ೩೧: ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೯ನೇ ವಾರ್ಷಿಕ ಮಹಾಸಭೆ ಸಂಪಾಜೆ ಶ್ರೀ ಪಂಚಲಿAಗೇಶ್ವರ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಯನ್.ಸಿ. ಅನಂತ್ ಊರುಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪಾಜೆ ಮತ್ತು ಚೆಂಬು ಗ್ರಾಮದ ಸದಸ್ಯರನ್ನು ಒಳಗೊಂಡ ಸಂಘವು ೨,೮೩೨ ಸದಸ್ಯರನ್ನು ಹೊಂದಿದ್ದು, ಸಂಘದ ಪಾಲು ಬಂಡವಾಳ ರೂ. ೨೮೯.೨೨ ಲಕ್ಷ ಆಗಿರುತ್ತದೆ. ೨೦೨೨-೨೬ನೇ ಸಾಲಿನಲ್ಲಿ ಸಂಘವು ರೂ. ೩೪೭ ಕೋಟಿ ವಾರ್ಷಿಕ ವ್ಯವಹಾರ ಮಾಡಿದ್ದು, ಸಂಘದಲ್ಲಿ ರೂ. ೨೫೩೯.೯೨ ಲಕ್ಷ ಠೇವಣಾತಿ ಸಂಗ್ರಹವಿದೆ. ರೂ. ೩೭೫೨.೯೮ ಲಕ್ಷಗಳನ್ನು ಸಂಘದ ಸದಸ್ಯರಿಗೆ ವಿವಿಧ ರೀತಿಯ ಸಾಲವಾಗಿ ವಿತರಿಸಲಾಗಿರುತ್ತದೆ.
೨೦೨೫-೨೬ ರ ಅವಧಿಯಲ್ಲಿ ಸಂಘವು ರೂ. ೬೦.೬೮ ಲಕ್ಷ ವಾರ್ಷಿಕ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೦ ರಂತೆ ಲಾಭಾಂಶವನ್ನು ಹಂಚಲಾಗುವುದು ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಕಳೆದ ಮಹಾಸಭೆಯ ವರದಿ ಮತ್ತು ವಾರ್ಷಿಕ ಲೆಕ್ಕಪತ್ರ ಪರಿಶೋಧಕರ ವರದಿಯನ್ನು ವಿಮರ್ಶಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಚರ್ಚೆಯಲ್ಲಿ ಭಾಗವಹಿಸಿದ ಬಿ.ಆರ್. ಶಿವರಾಮ್ ಮಾತನಾಡಿ, ಸಂಘದ ಆರ್ಥಿಕ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿಯನ್ನು ಶ್ಲಾಘಿಸಿ, ನಿಗದಿಪಡಿಸಿದ ಡಿವಿಡೆಂಡ್ ಹಂಚಿಕೆ ಬಳಿಕ ಉಳಿದ ಮೊತ್ತವನ್ನು ಭವಿಷ್ಯದ ದೃಷ್ಟಿಯಿಂದ ಡಿವಿಡೆಂಡ್ ಸಮೀಕರಣ ನಿಧಿಗೆ ವರ್ಗಾಯಿಸಲು ಸಲಹೆ ನೀಡಿದರು.
ಸ್ಥಳೀಯವಾಗಿ ಬೆಳೆಯುತ್ತಿರುವ ಹೆಚ್ಚಿನೆಲ್ಲಾ ಕೃಷಿ ಉತ್ಪನ್ನಗಳಿಗೆ ಸಂಘದ ಮೂಲಕ ಮಾರಾಟ ವ್ಯವಸ್ಥೆ ಮಾಡಿ ಕೃಷಿಕರಿಗೆ ನೆರವಾದ ಬಗ್ಗೆ ತಿರುಮಂ ಸೋನ ಮತ್ತು ಕುಮಾರ್ ಚೆದ್ಕಾರ್ ಆಡಳಿತ ಮಂಡಳಿಗೆ ಅಭಿನಂದಿಸಿದರು. ಸಂಘದ ಸದಸ್ಯರಿಗೆ ಸಾಲದ ಮೇಲೆ ವಿಮಾಸೌಲಭ್ಯ ಕಲ್ಪಿಸುವ ಬಗೆಗಿನ ಅಧ್ಯಕ್ಷರ ಚಿಂತನೆಗೆ ಮೀನಾಕುಮಾರಿ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಆದಂಕುAಞÂ, ವೆಂಕಪ್ಪ ಬೊಳಾರು, ಟಿ.ಎ. ಗಣಪತಿ, ಕೆ.ಎಸ್. ಜಗನ್ನಾಥ್, ಕರುಣಾಕರ ನಿಟಂಜಿ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದರು. ರೈತರು ಪಡೆದ ಸಾಲವನ್ನು ತಪ್ಪದೆ ಸದ್ವಿನಿಯೋಗ ಮಾಡುವಂತೆ, ರೈತರು ಬೆಳೆದ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದ ಅಧ್ಯಕ್ಷ ಅನಂತ್ ಅವರು, ಸಂಘದ ಅಭಿವೃದ್ಧಿಗಾಗಿ ಸಹಕರಿಸುತ್ತಿರುವ ಸದಸ್ಯರುಗಳನ್ನು ಅಭಿನಂದಿಸಿದರು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಮೂಲಕ ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ಮಾರಾಟ ವ್ಯವಹಾರ ಮಾಡಿದ ಎರಡೂ ಗ್ರಾಮದ ತಲಾ ಐವರು ಕೃಷಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಂಘದ ನಿರ್ದೇಶಕಿ ವಾಣಿ ಜಗದೀಶ್ ಪ್ರಾರ್ಥಿಸಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ್ ವರದಿ ವಾಚಿಸಿದರು. ಉಪಾಧ್ಯಕ್ಷ ಯಶವಂತ ದೇವರಗುಂಡ ವಂದಿಸಿದರು. ಸಂಘದ ಎಲ್ಲಾ ನಿರ್ದೇಶಕರು, ಕೆ.ಡಿ.ಸಿ.ಸಿ. ಬ್ಯಾಂಕ್ ಅಧಿಕಾರಿ ವಿ.ಜಿ. ಹರೀಶ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ದೇವಸ್ಥಾನದ ಆವರಣದಲ್ಲಿ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಶ್ರದ್ಧಾಂಜಲಿ
ಮಹಾಸಭೆಯಲ್ಲಿ ಆಗಮಿಸಿದ್ದ ಮಾಜಿ ಅಧ್ಯಕ್ಷರೂ, ಹಿರಿಯ ಸಹಕಾರಿಗಳೂ ಆಗಿರುವ ಆದಂಕುAಞÂ ಸೆಂಟ್ಯಾರ್ ಅವರು ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದು, ಸಂಘದ ನಿರ್ದೇಶಕ ದಿನೇಶ್ ಸಣ್ಣಮನೆ ಮತ್ತು ಸಿಬ್ಬಂದಿಗಳು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದ ಮಾಹಿತಿ ತಿಳಿದು ಸಭೆಯ ಕೊನೆಯಲ್ಲಿ ದಿವಂಗತರ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.