ಕಣಿವೆ, ಜು. ೩೧: ಮೈಸೂರಿನಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ನೀರಾವರಿ ಸಲಹಾ ಸಮಿತಿ ಸಭೆ ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ವಿಫಲಗೊಂಡಿದ್ದು, ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಜಲಸಂಪನ್ಮೂಲ ಇಲಾಖೆ ‘ಶಕ್ತಿ’ ಗೆ ಮಾಹಿತಿ ನೀಡಿದೆ.
ಮೈಸೂರಿನ ಪ್ರಾದೇಶಿಕ ಆಯುಕ್ತರಾದ ನಿತಿನ್ ಪಟೇಲ್ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಹಾರಂಗಿ ಯೋಜನಾ ವೃತ್ತದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ನೀರಾವರಿ ನಿಗಮದ ಅಧಿಕಾರಿಗಳು, ಚೆಸ್ಕಾಂ, ಪೊಲೀಸ್ ಹಾಗೂ ನೀರು ಬಳಕೆದಾರ ಮಹಾಮಂಡಳದ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಾರಂಗಿ ಜಲಾಶಯದ ನೀರು ಸಂಗ್ರಹದ ಮಾಹಿತಿಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಅಂತಿಮವಾಗಿ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಕೆರೆ ಕಟ್ಟೆಗಳಿಗೆ ತುಂಬಿಸಿ ಕುಡಿಯುವ ನೀರು ನಿರ್ವಹಿಸುವ ಸಂಬAಧವಾಗಿ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರುವುದಾಗಿ ಸಭೆಯಲ್ಲಿ ವ್ಯಕ್ತವಾಗಿದೆ.