ಮಡಿಕೇರಿ, ಜು. ೩೧: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸಿದ ಯುವಕರ ಮೇಲೆ ದಾಖಲಿಸಲಾಗಿರುವ ಕಾನೂನು ಬಾಹಿರ ಮೊಕದ್ದಮೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ಇಲ್ಲಿನ ಇಂದಿರಾಗಾAಧಿ ವೃತ್ತದಲ್ಲಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು; ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಹಾಗೂ ಶಿಕ್ಷಣ ಸಚಿವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್; ನೀಟ್ ಪ್ರಶ್ನೆ ಪತ್ರಿಕೆ ವಿರುದ್ಧದ ನ್ಯಾಯಕ್ಕಾಗಿನ ಹೋರಾಟ ದೇಶವ್ಯಾಪಿ ಪಸರಿಸಿದೆ.

ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರ ಮೇಲೆ ಸರಕಾರದ ನಿರಂತರ ಶೋಷಣೆಯ ನಡೆ ಖಂಡನೀಯ, ಇಂತಹ ಹೋರಾಟಕ್ಕೆ ಎಸ್‌ಡಿಪಿಐ ಸದಾ ಮುಂದೆ ನಿಲ್ಲಲಿದೆ ಎಂದು ಹೇಳಿದರು.

ಅಭಿವೃದ್ಧಿಯ ಚಿಂತನೆಯ ಭಾರತದ ನೀರ್ಮಾತೃಗಳಾದ ವಿದ್ಯಾರ್ಥಿಗಳಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಒದಗಿಸುವದು ಸರಕಾರದ ಕೆಲಸ; ಆದರೆ ನಿರಂಕುಶ ಆಡಳಿತಗಾರರು ಹೋರಾಟಗಾರರಿಗೆ ಸ್ಪಂದಿಸುವ ಬದಲಿಗೆ ಹೋರಾಟಗಾರರ ಮೇಲೆ ಮೊಕದ್ದಮೆ ಹಾಕಿದ್ದಾರೆ. ಇದರಿಂದಾಗಿ ಕೋಮು ಚಿಂತನೆ ಹಾಗೂ ಅಭಿವೃದ್ಧಿಗಾಗಿ ಐಖ್ಯ ಹೋರಾಟ ಆರಂಭವಾಗಿದ್ದು, ದೇಶಾದ್ಯಂತ ಜಾತಿ, ಬೇಧ, ಭಾಷೆ ಮೀರಿ ಐಖ್ಯತೆ ಮೂಡುತ್ತಿದೆ. ಸಂವಿಧಾನಕ್ಕೆ ಗೌರವ ಕೊಡುವಂತಹ ಮನಸುಗಳು ಮುಂದೆ ಬಂದಿವೆ. ಇಂತಹ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಆಗ್ರಹಿಸಿದರಲ್ಲದೆ, ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಪಕ್ಷದ ಉಪಾಧ್ಯಕ್ಷ ಮನ್ಸೂರ್ ಅಹಮದ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ, ಯುವ ಘಟಕದ ಜುನೈದ್, ಮಹಿಳಾ ಘಟಕದ ನೌಶಿಯಾ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಮೇರಿ ವೇಗಸ್, ಮೈಕಲ್ ವೇಗಸ್ ಇತರರು ಪಾಲ್ಗೊಂಡಿದ್ದರು.