- ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಜು. ೩೧: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮತದಾರರ ಮಾಹಿತಿ ಡಿಜಿಟಲೀಕರಣ ಕೊಡಗು ಜಿಲ್ಲೆಯಲ್ಲಿ ಶೇ.೮೬ರಷ್ಟು ಪೂರ್ಣಗೊಂಡಿದ್ದು, ೩೪,೩೭೭ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರ ಎಂದು ಗುರತಿಸಲಾಗಿದ್ದು, ಇವರು ಆಗಸ್ಟ್ ೧೭ ರಂದು ಪ್ರಕಟವಾಗಲಿರುವ ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ.

ಯಾವುದೇ ಮತದಾರರನ್ನು ಎ.ಎಸ್.ಡಿ.ಡಿ.ಒ ಂbseಟಿಣ (ಗೈರು), Shiಜಿಣeಜ (ಸ್ಥಳಾಂತರ), ಆeಚಿಣh (ಸಾವು), ಆuಠಿಟiಛಿಚಿಣe (ನಕಲಿ), ಔಣheಡಿs (ಇತರೆ)) ಎಂದು ವರ್ಗೀಕರಿಸುವ ಮುನ್ನ ಬಿಎಲ್‌ಓ ಸ್ಥಳ ಮಹಜರು ನಡೆಸುವುದು ಕಡ್ಡಾಯ. ಆದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿಎಲ್‌ಓಗಳು ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿ ವಾಪಸ್ಸು ನೀಡಲು ತಡಮಾಡಿದ್ದವರನ್ನೂ ಕೂಡ ಶಾಶ್ವತವಾಗಿ ಸ್ಥಳಾಂತರ, ಗೈರು ಮತದಾರರು ಎಂದು ನಮೂದಿಸಿ ಎಎಸ್‌ಡಿಡಿಒ ಎಂದು ವರ್ಗೀಕರಿಸಿರುವ ಘಟನೆ ಬೆಳಕಿಗೆ ಬಂದಿದೆ.

ವೀರಾಜಪೇಟೆ ಕ್ಷೇತ್ರದಲ್ಲಿ ೩೫,೦೪೭ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ೨೯,೯೧೦ ಮತದಾರರನ್ನು ಎಎಸ್‌ಡಿಡಿಒ ಅಡಿಯಲ್ಲಿ ಗುರುತಿಸಲಾಗಿದೆ. ಒಟ್ಟು ೬೪,೯೫೭ ಮಂದಿ ಮತದಾರರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ. ಈ ಪೈಕಿ ವೀರಾಜಪೇಟೆ ಕ್ಷೇತ್ರದಲ್ಲಿ ೨೦,೦೫೯ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ೧೪,೩೧೮ ಮತದಾರರನ್ನು ಶಾಶ್ವತವಾಗಿ ಸ್ಥಳಾಂತರ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೩೪,೩೭೭ ಮತದಾರರು ಸ್ಥಳಾಂತರ ಎಂದು ನಮೂದಿಸಲಾಗಿದೆ.

೩೪,೩೭೭ ಮತದಾರರು ಎಲ್ಲಿ?

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳು ಸೇರಿ ಶಾಶ್ವತ ಸ್ಥಳಾಂತರ ಎಂದು ೩೪,೩೭೭ ಮತದಾರರನ್ನು ನಮೂದಿಸಲಾಗಿದೆ. ಆದರೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿರುವ ಅರ್ಹ ಮತದಾರರು ಕೇವಲ ಎರಡು ವರ್ಷದಲ್ಲಿ ಎಲ್ಲಿಗೆ ಸ್ಥಳಾಂತರಗೊAಡಿದ್ದಾರೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ತೋಟದ ಕಾರ್ಮಿಕರು ಒಂದೇ ತೋಟದಲ್ಲಿ ಕೆಲಸ ಮಾಡುವುದು ಕಡಿಮೆ. ಲೈನ್‌ಮನೆಯಲ್ಲಿ ವಾಸಿಸುವ ಸಂದರ್ಭದಲ್ಲಿ ಆಯಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುತ್ತಾರೆ. ನಂತರ ಕೆಲಸಕ್ಕಾಗಿ ತೋಟ ಬದಲಾಯಿಸಿದರೂ ಕೂಡ ತಮ್ಮ ಮತವನ್ನು ಈ ಹಿಂದಿನ ಬೂತ್‌ನಲ್ಲೇ ಬಹುತೇಕರು ಉಳಿಸಿಕೊಂಡಿದ್ದಾರೆ. ಇದೀಗ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶಾಶ್ವತವಾಗಿ ಸ್ಥಳಾಂತರ ಎಂದು ಗುರುತಿಸಿರುವ ಮತದಾರರಲ್ಲಿ ಲೈನ್‌ಮನೆಗಳಲ್ಲಿ ವಾಸಿಸುವ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಮತದಾರರೊಬ್ಬರು ಭರ್ತಿ ಮಾಡಿದ ಎನ್ಯುಮರೇಶನ್ ಫಾರ್ಮ್ ಬಿ.ಎಲ್.ಓ ಒಬ್ಬರಿಗೆ ವಾಪಸ್ಸು ನೀಡಲು ತಡವಾಗಿದ್ದರಿಂದ ಆ ಮತದಾರರನ್ನು ಅವರ ಕುಟುಂಬದಲ್ಲಿ ಕೂಡ ಸರಿಯಾಗಿ ವಿಚಾರಣೆ ನಡೆಸದೆ ಶಾಶ್ವತವಾಗಿ ಸ್ಥಳಾಂತರ ಎಂದು ನಮೂದಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆಗಸ್ಟ್ ೮ ರವರೆಗೆ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಓಗಳು ಮತದಾರರನ್ನು ಎಎಸ್‌ಡಿಡಿಒ ಅಡಿಯಲ್ಲಿ ತಪ್ಪಾಗಿ ನಮೂದಿಸಿದ್ದಲ್ಲಿ ಅಂತಹ ಮತದಾರರು ಆಗಸ್ಟ್ ೮ ರೊಳಗೆ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ಇದೆ. ಮತದಾರ ಮೃತಪಟ್ಟಿದ್ದರೆ, ಕಡ್ಡಾಯವಾಗಿ ಅವರ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಪ್ರಮಾಣಪತ್ರ ಇಲ್ಲದೇ ಇದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವವರಿಂದ ಸಹಿ ಪಡೆದುಕೊಳ್ಳುವುದು ಕಡ್ಡಾಯ. ಒಂದೊಮ್ಮೆ ಮತದಾರರು ಬದುಕಿದ್ದೂ ಅವರನ್ನು ‘ಮೃತ’ ಎಂದು ನಮೂದಿಸಿದ್ದರೆ, ಕೂಡಲೇ ಅವರು ಬಿಎಲ್‌ಓ ಅವರನ್ನು ಸಂಪರ್ಕಿಸಿ ಸರಿಪಡಿಸಬಹುದಾಗಿದೆ.

ಮತದಾರರು ವಾಸವಿರುವ ವಿಳಾಸ ಮತ್ತು ಮತದಾರರ ಪಟ್ಟಿಯಲ್ಲಿ ಇರುವ ವಿಳಾಸ ಎರಡೂ ಒಂದೇ ಆಗಿದ್ದು, ಅವರನ್ನು ‘ಶಾಶ್ವತ ಸ್ಥಳಾಂತರ’ ಎಂದು ನಮೂದಿಸಿದ್ದರೆ, ಅದನ್ನು ಸರಿಪಡಿಸಬಹುದು. ಇಂತಹ ಮತದಾರರು ತಮ್ಮ ಮತಗಟ್ಟೆಯ ಬಿಎಲ್‌ಓಗಳನ್ನು ಸಂಪರ್ಕಿಸಿ, ತಮ್ಮ ಗಣತಿ ನಮೂನೆಗಳನ್ನು ತಪ್ಪಾಗಿ ಎಎಸ್‌ಡಿಡಿಒ ಎಂದು ನಮೂದಿಸಲಾಗಿದೆ ಎಂಬುದನ್ನು ತಿಳಿಸಬೇಕು. ಬಿಎಲ್‌ಓಗಳು ಅದನ್ನು ಮತದಾರರ ನೋಂದಣಾಧಿಕಾರಿಗೆ (ಇಆರ್‌ಓ) ತಿಳಿಸುತ್ತಾರೆ. ಈಗಾಗಲೇ ಎಎಸ್‌ಡಿಡಿಒ ಎಂದು ವರ್ಗೀಕರಿಸಲಾದ ಗಣತಿ ನಮೂನೆಗಳನ್ನು, ಮತದಾರರಿಗೆ ವಿತರಣೆ ಮಾಡಲು ಸೂಚಿಸುವ ಅಧಿಕಾರ ಇಆರ್‌ಓಗೆ ಇದೆ. ನಮೂನೆ ಪಡೆದುಕೊಂಡು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ ಬಿಎಲ್‌ಓಗೆ ಸಲ್ಲಿಸಬೇಕು. ಅಂತಹ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಪ್ರಕಟವಾಗಲಿದೆ. ಆಗಸ್ಟ್ ೮ ರವರೆಗೆ ಮಾತ್ರ ರೋಲ್ ಬ್ಯಾಕ್ ಮಾಡಿಕೊಳ್ಳಲು ಅವಕಾಶ ಇದ್ದು, ಆಗ ಅವರ ಹೆಸರು ಮತದಾರರ ಕರಡು ಪಟ್ಟಿಯಲ್ಲಿ ಉಳಿಯಲಿದೆ. ಇಲ್ಲದಿದ್ದರೆ ಕರಡು ಪಟ್ಟಿ ಪ್ರಕಟಗೊಂಡ ಬಳಿಕ ಫಾರ್ಮ್ ೬ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಎಎಸ್‌ಡಿಡಿಒ ಅಡಿಯಲ್ಲಿ ವರ್ಗೀಕರಿಸಲಾಗಿರುವ ಮತದಾರರ ಪಟ್ಟಿಯನ್ನು ಈಗಾಗಲೇ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಎಎಸ್‌ಡಿಡಿಒ ಅಡಿಯಲ್ಲಿ ೨೯,೯೧೦ ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ ೪,೩೮೮ ಪತ್ತೆ ಹಚ್ಚಲಾಗದ ಗೈರು ಮತದಾರರು, ೧೪,೦೫೧ ಮತದಾರರು ಶಾಶ್ವತ ಸ್ಥಳಾಂತರ, ೭,೪೨೪ ಮತದಾರರು ಮರಣ, ೨,೭೫೬ ಮತದಾರರು ಡುಪ್ಲಿಕೇಟ್ ಹಾಗೂ ೪೪ ಮತದಾರರನ್ನು ಇತರೆ ಎಂದು ಗುರುತಿಸಲಾಗಿದೆ.

ವೀರಾಜಪೇಟೆ ಕ್ಷೇತ್ರದಲ್ಲಿ ಎಎಸ್‌ಡಿಡಿಒ ಎಂದು ೩೫,೦೪೭ ಮತದಾರರನ್ನು ನಮೂದಿಸಲಾಗಿದೆ. ಈ ಪೈಕಿ ೫,೮೩೭ ಪತ್ತೆಹಚ್ಚಲಾಗದ ಗೈರು ಮತದಾರರು, ೨೦,೦೫೯ ಶಾಶ್ವತ ಸ್ಥಳಾಂತರ, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ೬,೧೮೫ ಮತದಾರರು ಮರಣ, ೨,೮೯೦ ಮತದಾರರು ಡುಪ್ಲಿಕೇಟ್ ಮತ್ತು ೭೬ ಮತದಾರರನ್ನು ಇತರೆ ಎಂದು ಗುರುತಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಜುಲೈ ೩೦ ಮಧ್ಯಾಹ್ನ ಎರಡು ಗಂಟೆಯವರೆಗೆ ೬೪,೯೫೭ ಮತದಾರರನ್ನು ಎಎಸ್‌ಡಿಡಿಒ ಎಂದು ಗುರುತಿಸಲಾಗಿದೆ.

ಇದರಲ್ಲಿ ೧೧,೦೪೭ ಮತದಾರರು ಪತ್ತೆಹಚ್ಚಲಾಗದ\ಗೈರು, ೩೪,೩೭೭ ಶಾಶ್ವತ ಸ್ಥಳಾಂತರ, ೧೩,೬೭೬ ಮತದಾರರು ಮರಣ, ೫,೭೩೩ ಮತದಾರರು ಡುಪ್ಲಿಕೇಟ್ ಹಾಗೂ ೧೨೪ ಮತದಾರರನ್ನು ಇತರೆ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಎಎಸ್‌ಡಿಡಿಒ ಸೇರಿ ೪೧೦ ಬೂತ್‌ಗಳಲ್ಲಿ ಶೇ. ೧೦೦ ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. ೧೪೦ ಮತಗಟ್ಟೆಗಳಲ್ಲಿ ಶೇ. ೯೦ ರಷ್ಟು ಮೇಲ್ಪಟ್ಟು ಡಿಜಿಟಲೀಕರಣ ಪೂರ್ಣಗೊಂಡರೆ, ಎರಡು ಬೂತ್‌ಗಳಲ್ಲಿ ೭೫ ರಿಂದ ಶೇ. ೯೫ ರಷ್ಟು ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ.