ಮಡಿಕೇರಿ, ಜು. ೩೦: ‘ಪ್ರತಿಯೋರ್ವ ಪ್ರಜೆಗೂ ತಲೆಗೊಂದು ಸೂರು., ಕುಡಿಯಲು ನೀರು’ ಒದಗಿಸುವದು ಆಡಳಿತದಲ್ಲಿರುವ ಸರಕಾರದ ಉದ್ದೇಶ ಹಾಗೂ ಕರ್ತವ್ಯವೂ ಹೌದು. ಆದರೆ., ಈ ಎರಡು ಯೋಜನೆಗಳಲ್ಲಿ ಆಗುವಷ್ಟು ಅವ್ಯವಹಾರ, ಅವ್ಯವಸ್ಥೆಗಳೂ ಬೇರೆಲ್ಲೂ ಕಾಣಸಿಗುವದಿಲ್ಲ. ವರ್ಷಗಳೇ ಉರುಳಿದರೂ ಈ ಯೋಜನೆಗಳು ಪೂರ್ಣಗೊಳ್ಳವದೇ ಇಲ್ಲ; ಬದಲಿಗೆ ಯೋಜನೆಗೆ ಮೀಸಲಿಟ್ಟಿರುವ ಹಣ ಮಾತ್ರ ಖಾಲಿಯಾಗಿರುತ್ತದೆ,.! ಯೋಜನೆಗಳು ಮಾತ್ರ ಅರೆಬರೆ ಅವಶೇಷಗಳಂತೆ ಅಂಗಾತ ಮಲಗಿರುತ್ತವೆ..!

ಇದಕ್ಕೆ ಸಜೀವ ಉದಾಹರಣೆಯೆಂದರೆ ಮಡಿಕೇರಿ ನಗರದಲ್ಲಿ ನಡೆಯುತ್ತಿರುವ ಮನೆಮನೆಗೆ ಕುಡಿಯುವ ನೀರನ್ನೊದಗಿಸುವ ‘ಅಮೃತ್-೨’ ಯೋಜನೆ. ಯೋಜನೆ ಆರಂಭಗೊAಡಲ್ಲಿAದ ಇದುವರೆಗೆ ಒಂದಿಲ್ಲೊAದು ಸಮಸ್ಯೆಗಳನ್ನೇ ಸೃಷ್ಟಿ ಮಾಡುತ್ತಾ ಸಾಗುತ್ತಿರುವ ಈ ಯೋಜನೆ ಮಡಿಕೇರಿ ನಗರದ ಜನತೆಯ ನೆಮ್ಮದಿಯನ್ನು ಸಮಾಧಿ ಮಾಡಿದೆ. ಮೊದಲೇ ಮಡಿಕೇರಿ ನಗರದ ರಸ್ತೆಗಳ ಪರಿಸ್ಥಿತಿ ಅಷ್ಟಕಷ್ಟೇ.,

ಆದರೆ ಇದೀಗ ಈ ಯೋಜನೆಯಿಂದಾಗಿ ಅಳಿದುಳಿದ ರಸ್ತೆಗಳನ್ನು ಕೂಡ ಧ್ವಂಸ ಮಾಡಲಾಗಿದೆ. ಪೈಪ್ ಅಳವಡಿಸುವ ಕಾರ್ಯಕ್ಕಾಗಿ ರಸ್ತೆ ಬದಿ, ಮಧ್ಯಭಾಗಗಳನ್ನು ಕೊರೆದುಹಾಕಲಾಗಿದ್ದು ಸಂಚರಿಸಲಾಗದAತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೂ. ೪೭.೪೧ ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಪೂರ್ಣಗೊಳ್ಳುವ ಮೊದಲೇ ರೂ. ೪೦ ಕೋಟಿ ಖಾಲಿಯಾಗಿದೆ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ನಡೆಸಲ್ಪಡುತ್ತಿರುವ ಕಾಮಗಾರಿಯ ಗುತ್ತಿಗೆದಾರರಿಗೆ ಮೊದಲೇ ಹಣ ಪಾವತಿ ಮಾಡಲಾಗಿದೆ. ೪ಐದನೇ ಪುಟಕ್ಕೆ

ಬಾಯ್ತೆರೆದು ನಿಂತ ಪೈಪ್‌ಗಳು..!

ನೀರು ಸರಬರಾಜು ಮಾಡಲು ನಗರವಿಡೀ ರಸ್ತೆ ಬದಿಯನ್ನು ಅಗೆಯಲಾಗಿದೆ. ಕೆಲವೆಡೆ ಬೃಹತ್ ಗಾತ್ರದ ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಪೈಪ್‌ಗಳನ್ನು ಜೋಡಿಸದೇ ಹಾಗೆಯೇ ಬಿಡಲಾಗಿದೆ. ಆ ಪೈಪ್‌ಗಳು ರಸ್ತೆ ಬದಿ ಬಾಯ್ತೆರೆದು ನಿಂತಿವೆ. ಅದರ ತುದಿ ಭಾಗವನ್ನು ಮುಚ್ಚುವಷ್ಟು (ಎಂಡ್ ಕ್ಯಾಪ್ ಹಾಕಿ) ಕೂಡ ಮಂಡಳಿಯವರಿಗೆ ವ್ಯವಧಾನವಿಲ್ಲದಾಗಿದೆ. ವಾಹನ ಸಂಚಾರಕ್ಕೂ ಇದು ತೊಡಕಾಗಿ ಪರಿಣಮಿಸುತ್ತಿದೆ. ಇದರಿಂದ ಮುಂದಾಗಬಹುದಾದ ಅಪಾಯವನ್ನರಿತು ಪೊಲೀಸರು ಕೆಲವು ಕಡೆಗಳಲ್ಲಿ ಬ್ಯಾರಿಕೇಡ್, ಕಲ್ಲುಗಳನ್ನು ಇರಿಸಿ ತಮ್ಮ ಕರ್ತವ್ಯ ಮಾಡಿದ್ದಾರೆ.

ರಸ್ತೆಯುದ್ದಕ್ಕೂ ಹೊಂಡಗಳು..!

ಮಡಿಕೇರಿ ನಗರದ ರಸ್ತೆಗಳು ಸಮರ್ಪಕವಾದ ದುರಸ್ತಿ ಕಾಣದೆ ವರ್ಷಗಳೇ ಉರುಳಿವೆ. ಈ ನಡುವೆ ಅಲ್ಲಲ್ಲಿ ಒಂದಿಷ್ಟು ಬಾಕಿ ಉಳಿದಿದ್ದ ರಸ್ತೆಗಳನ್ನು ಕೂಡ ಈ ‘ಅಮೃತ್’ ನುಂಗಿಹಾಕಿದೆ. ರಸ್ತೆಬದಿಯಲ್ಲಿ ಪೈಪ್ ಅಳವಡಿಸಲು ಗುಂಡಿತೋಡಲಾಗಿದ್ದು ಅದನ್ನು ಸರಿಯಾದ ಕ್ರಮದಲ್ಲಿ ಮುಚ್ಚದೇ ಇರುವದರಿಂದ ಇದೀಗ ರಸ್ತೆಬದಿ ಕೆಸರುಮಯವಾದ ಹೊಂಡಗಳಾಗಿವೆ. ಕಿರಿದಾದ ರಸ್ತೆ ಬದಿಗಳಲ್ಲಿ ವಾಹನಗಳ ಚಕ್ರ ಗುಂಡಿಯಲ್ಲಿ ಹರಿದು ರಸ್ತೆ ಬದಿ ತೋಡಿನಂತೆ ಆಗಿದೆ. ಇನ್ನು ಕಾಂಕ್ರಿಟ್ ರಸ್ತೆ ಸೇರಿದಂತೆ ಡಾಮರು ರಸ್ತೆಗಳ ಅಡ್ಡಲಾಗಿ ನಲ್ಲಿ ಸಂಪರ್ಕ ಅಳವಡಿಸುವ ಸಲುವಾಗಿ ರಸ್ತೆಯನ್ನು ಕತ್ತರಿಸಲಾಗಿದ್ದು, ಸರಿಯಾಗಿ ಮುಚ್ಚದೆ ಇದೀಗ ಗುಂಡಿ ಬಿದ್ದು ವಾಹನ ಸಂಚರಿಸುವಾಗ ‘ದಡ ಬಡ’ ಎಂದು ಸದ್ದಿನೊಂದಿಗೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮಾಯವಾಗುತ್ತಿರುವ ಇಂಟರ್‌ಲಾಕ್‌ಗಳು..!

ಮಡಿಕೇರಿ ನಗರದ ಕೆಲವು ಕಾಂಕ್ರಿಟ್ ರಸ್ತೆಗಳ ಪೈಕಿ ಕೈಗಾರಿಕಾ ಬಡಾವಣೆಯ ಕಾಂಕ್ರಿಟ್ ರಸ್ತೆ ಉತ್ತಮವಾದ ರಸ್ತೆಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಉತ್ತಮ ಗುಣಮಟ್ಟದ ಇಂಟರ್‌ಲಾಕ್‌ಗಳನ್ನು ಅಳವಡಿಸುವದರೊಂದಿಗೆ ವಿಶಾಲವಾದ ರಸ್ತೆಯಾಗಿತ್ತು. ಈ ‘ಅಮೃತ’ವನ್ನು ಕೊಂಡೊಯ್ಯುವ ಸಲುವಾಗಿ ಇಂಟರ್‌ಲಾಕ್‌ಗಳನ್ನು ಕಿತ್ತು ಪೈಪ್ ಅಳವಡಿಸಲಾಯಿತು. ನಂತರದಲ್ಲಿ ಸರಿಯಾಗಿ ಮುಚ್ಚದೆ ಇರುವದರಿಂದ ರಸ್ತೆ ಬದಿ ಗುಂಡಿಬಿದ್ದು ರಸ್ತೆ ಕೂಡ ಕಿಷ್ಕಿಂಧೆಯಾಗಿದೆ. ಕಿತ್ತುತೆಗೆದ ಇಂಟರ್‌ಲಾಕ್‌ಗಳನ್ನು ರಸ್ತೆಯ ಚರಂಡಿ ಬದಿಯಲ್ಲಿ ಉದ್ದಕ್ಕೂ ರಾಶಿ ಹಾಕಲಾಗಿದ್ದು, ಅವುಗಳು ಚರಂಡಿಗೆ ಬಿದ್ದು ಚರಂಡಿ ಕೂಡ ಅಲ್ಲಲ್ಲಿ ಕಟ್ಟಿಕೊಂಡಿದೆ. ಬಡಾವಣೆಯಲ್ಲಿರುವ ಕೆಲವರು ತಮ್ಮ ಗೇಟ್ ಹಾಗೂ ರಸ್ತೆ ಎದುರು ತಾವುಗಳೇ ಕಲ್ಲು, ಮಣ್ಣು, ಇಂಟರ್‌ಲಾಕ್‌ಗಳನ್ನು ಹಾಕಿಕೊಂಡು ದಾರಿ ಮಾಡಿಕೊಂಡಿದ್ದಾರೆ. ಹಲವರು ತಮ್ಮ ವಾಹನದಲ್ಲಿ ಇಂಟರ್‌ಲಾಕ್‌ಗಳನ್ನು ಸಾಗಿಸಿ ಜಾಗ ಸ್ವಚ್ಛ ಮಾಡಿದ್ದಾರೆ! ಇತ್ತ ಕಾಲೇಜು ರಸ್ತೆಯಲ್ಲಿಯೂ ಇದೇ ಪರಿಸ್ಥಿತಿ. ರಸ್ತೆಯ ಅಂಚಿನಲ್ಲಿದ್ದ ಇಂಟರ್‌ಲಾಕ್ ಹಾಗೂ ಕಲ್ಲುಗಳನ್ನು ಕಿತ್ತು ಪಾದಚಾರಿಗಳಿಗಾಗಿ ನಿರ್ಮಿಸಿರುವ ಮಾರ್ಗದಲ್ಲಿ ರಾಶಿ ಹಾಕಲಾಗಿದ್ದು, ಇದರಿಂದ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ರಸ್ತೆ ಬದಿ ಗುಂಡಿ ಬಿದ್ದಿದೆ. ಇಲ್ಲೂ ಬಹುತೇಕ ಇಂಟರ್‌ಲಾಕ್‌ಗಳು ಮಾಯವಾಗುತ್ತಿದ್ದು, ತಮಗೆ ಬೇಕಾದವರು ಸದ್ದಿಲ್ಲದೆ ಕೊಂಡೊಯ್ಯುತ್ತಿದ್ದಾರೆ..!

೧೨೫ ಕಿ.ಮೀ. ಸಂಪರ್ಕ..!

ಈ ಯೋಜನೆಯಡಿಯಲ್ಲಿ ನೂತನ ಪಯಪ್‌ಗಳ ಅಳವಡಿಕೆ ಕಾರ್ಯ ಮಡಿಕೇರಿ ನಗರದ ೧೨೫ ಕಿ.ಮೀ.ನಷ್ಟು ವಿಸ್ತೀರ್ಣದಲ್ಲಿ ನಡೆಯಬೇಕಿದೆ. ೭೭೦೦ ನಲ್ಲಿ ಸಂಪರ್ಕಗಳನ್ನು ಕಲ್ಪಿಸಬೇಕಿದೆ. ಬೆಂಗಳೂರಿನ ಕೆವಿಆರ್ ಕನ್ಸ÷್ಟçಕ್ಷನ್ಸ್ ಹೈಟ್ಸ್ ಪ್ರೆöÊವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ ೪೭.೬೬ ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಮುಗಿದ ಬಳಿಕ ೫ ವರ್ಷಗಳವರೆಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ಕೂಡ ಇದೇ ಸಂಸ್ಥೆ ನಭಾಯಿಸಬೇಕಿದೆ. ಆದರೆ ಇದೀಗ ಯೋಜನೆಯೇ ಮಣ್ಣುಪಾಲಾಗಿದೆ..!

ಡಿಸೆಂಬರ್‌ಗೆ ಪೂರ್ಣಗೊಳಿಸುವ ಭರವಸೆ..!

ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಅಮೃತ್-೨ ಯೋಜನೆಯ ವೆಚ್ಚ ರೂ. ೪೭.೪೧ ಕೋಟಿ. ಇದರಲ್ಲಿ ಕೇಂದ್ರ ಸರಕಾರ ಶೇ.೫೦, ರಾಜ್ಯ ಸರಕಾರ ಶೇ.೪೦ ಹಾಗೂ ಸ್ಥಳೀಯ ಸಂಸ್ಥೆ ಶೇ. ೧೦ರಷ್ಟನ್ನು ಭರಿಸಬೇಕಿದೆ. ಕೇಂದ್ರದ ಪಾಲು ಇದರಲ್ಲಿ ಹೆಚ್ಚಿದೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮೂಲಕ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಾಮಗಾರಿ ನಡೆಯುತ್ತಿದ್ದು, ಷರತ್ತಿನ ಪ್ರಕಾರ ೧೮ ತಿಂಗಳುಗಳಲ್ಲಿ, ಅಂದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಕೂಡ ಪೈಪ್‌ಲೈನ್ ಅಳವಡಿಕೆ ಕಾರ್ಯವೇ ಪೂರ್ಣಗೊಂಡಿಲ್ಲ. ಈ ಬಗ್ಗೆ ಕಳೆದ ಜೂನ್ ೨೨ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಯದುವೀರ್ ಒಡೆಯರ್ ಪ್ರಶ್ನಿಸಿದ ಸಂದರ್ಭ ಉತ್ತರಿಸಿದ ಅಭಿಯಂತರ ಜಯಕುಮಾರ್; ಪೈಪ್‌ಗಳ ಅಲಭ್ಯತೆಯಿಂದ ಪೂರ್ಣಗೊಳಿಸಲಾಗಲಿಲ್ಲ. ಶೇ.೭೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗಡೆ ಪೂರ್ಣಗೊಳಿಸುವದಾಗಿ ಭರವಸೆ ನೀಡಿದ್ದರು. ೪೭.೪೧ ಕೋಟಿಯಲ್ಲಿ ೪೦ ಕೋಟಿ ಹಣ ಗುತ್ತಿಗೆದಾರನಿಗೆ ಪಾವತಿಯಾಗಿರುವುದು ಮಾತ್ರ ಈ ಯೋಜನೆಯ ಸಾಧನೆಯಾಗಿದೆ.

ಕಾಮಗಾರಿ ಸ್ಥಗಿತ..!

ಈ ಸಭೆ ಕಳೆದು, ಅಧಿಕಾರಿ ಭರವಸೆ ನೀಡಿ ಒಂದು ತಿಂಗಳು ಕಳೆದಿದೆ. ಆ ಸಭೆ ನಡೆದ ಬಳಿಕ ಕಾಮಗಾರಿ ಮುಂದುವರಿದಿರುವದು ಎಲ್ಲಿಯೂ ಕಂಡು ಬಂದಿಲ್ಲ. ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆದಾರರ ಕಡೆಯವರು, ಕಾಮಗಾರಿಗೆ ಬಳಸಲಾಗುತ್ತಿದ್ದ ಯಂತ್ರಗಳೂ ಕಾಣಸಿಗುತ್ತಿಲ್ಲ. ಕಾರ್ಮಿಕರ ಪತ್ತೆಯಿಲ್ಲ. ಕಾಮಗಾರಿಗೆ ಸಂಬAಧಿಸಿದ ಪೈಪ್, ಮರಳು, ಸಿಮೆಂಟ್ ಮುಂತಾದ ಸಾಮಗ್ರಿ ದಾಸ್ತಾನು ಮಾಡುತ್ತಿದ್ದ ಹಾಗೂ ವಾಹನ, ಯಂತ್ರಗಳನ್ನು ನಿಲುಗಡೆಗೊಳಿಸುತ್ತಿದ್ದ ಸಂಪಿಗೆಕಟ್ಟೆ ಬಳಿ ಇರುವ ಜಾಗದ ಗೇಟ್‌ಗೆ ಬೀಗ ಜಡಿಯಲಾಗಿದೆ. ಈ ಬಗ್ಗೆ ಹಿಂದೆ ನಡೆದ ದಿಶಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಕೆಲಸ ಆಗುವದಕ್ಕಿಂತ ಮುಂಚೆ ಹಣ ಪಾವತಿ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಒಂದು ವೇಳೆ ಗುತ್ತಿಗೆದಾರರು ಓಡಿಹೋದರೆ ಏನು ಮಾಡುತ್ತೀರಿ..? ಎಂದು ಪ್ರಶ್ನಿಸಿದ್ದರು. ಇದೀಗ ಅದೇ ರೀತಿ ಆಗಿದೆ., ಕಾಮಗಾರಿ ಅರ್ಧದಲ್ಲೇ ಆತ್ಮಹತ್ಯೆ ಮಾಡಿಕೊಂಡಿದೆ., ಗುಂಡಿಬಿದ್ದ ರಸ್ತೆಗಳೊಂದಿಗೆ ರಸ್ತೆಬದಿಗಳಲ್ಲಿ ಪೈಪ್‌ಗಳು ಮಾತ್ರ ಬಿದ್ದುಕೊಂಡಿವೆ. ನಗರದ ಜನತೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವಂತಾಗಿದೆ., ಇತ್ತ ಡಿಸೆಂಬರ್ ತಿಂಗಳ ಕ್ಯಾಲೆಂಡರನ್ನು ಗೋಡೆಗೆ ನೇತುಹಾಕಿ ಒಳಚರಂಡಿ ಮಂಡಳಿ ಅಧಿಕಾರಿ, ಸಿಬ್ಬಂದಿಗಳು ಮೈ ಚಳಿ ಕಾಯಿಸುತ್ತಾ ಬೆಚ್ಚಗೆ ಕುಳಿತಿದ್ದಾರೆ. ಮನೆ ಮನೆಗೆ ನಲ್ಲಿ ಮೂಲಕ ‘ಅಮೃತ’ ಬರುತ್ತದೆ ಎಂದು ನಂಬಿದ್ದ ಮಡಿಕೇರಿ ಜನತೆಯ ನೆಮ್ಮದಿಯ ಬದುಕಿಗೆ ಮಾತ್ರ ಸಮಸ್ಯೆಯ ಸಮಾಧಿ ಕಟ್ಟಲಾಗಿದೆ..!

- ಕುಡೆಕಲ್ ಸಂತೋಷ್