ಪೊನ್ನಂಪೇಟೆ, ಜು. ೩೦: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಧ್ಯಾತ್ಮಿಕ ಶಿಬಿರ ಭಕ್ತಿಭಾವದಿಂದ ನೆರವೇರಿತು.
ಬೆಳಿಗ್ಗೆ ಮಂಗಳಾರತಿ, ವೇದಘೋಷ ಹಾಗೂ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀ ರಾಮಕೃಷ್ಣ ಪೂಜೆ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಬಾಳೆಲೆಯ ವತ್ಸಲಾ ನಾರಾಯಣ ಅವರ ಕಾವೇರಿ ಕಲಾಸಮಿತಿಯಿಂದ ಭಜನೆ, ಅಧ್ಯಾತ್ಮಿಕ ಪ್ರವಚನ ಹಾಗೂ ವಿಶೇಷ ದೀಪಪೂಜೆ ನಡೆಯಿತು.
ಮಧ್ಯಾಹ್ನ ಮಹಾ ಆರತಿ, ಪ್ರಸಾದ ವಿತರಣೆ ನಡೆದವು. ಎಂ. ಆರ್.ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸ್ವಾಮಿ ವಿವೇಕಾನಂದರ ಜೀವನಾಧಾರಿತ “ಸೂತ್ರ ಮತ್ತು ಸಲಾಕೆ” ಗೊಂಬೆಯಾಟ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು.
ಸಂಜೆ ಡಾ. ಶಿವಪ್ಪ ಕೆ.ಕೆ. ಮತ್ತು ತಂಡದಿAದ ವಿಶೇಷ ಭಜನಾ ಕಾರ್ಯಕ್ರಮ ಜರುಗಿತು. ಬಳಿಕ ಮಹಾ ಆರತಿಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ಈ ಸಂದರ್ಭ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಅವರು ಅಧ್ಯಾತ್ಮಿಕ ಪ್ರವಚನ ನೀಡಿದರು. ಸ್ವಾಮಿ ವಿವೇಕಾನಂದರ ಆದರ್ಶಗಳು ರಾಷ್ಟç ನಿರ್ಮಾಣಕ್ಕೆ ಪ್ರೇರಕವಾಗಿವೆ. ಭಾರತದ ಅಧ್ಯಾತ್ಮಿಕ ಪರಂಪರೆ, ಸನ್ಯಾಸಿಗಳ ತ್ಯಾಗಮಯ ಜೀವನ, ಸೇವಾ ಮನೋಭಾವ ಹಾಗೂ ಆತ್ಮಸಾಧನೆಯ ಮಹತ್ವವನ್ನು ಯುವಜನತೆ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಚಿತ್ರಗಳು ಮತ್ತು ಪ್ರತಿಮೆಗಳು ಜಡ ವಸ್ತುಗಳಾಗಿದ್ದರೂ, ಅವು ಪ್ರತಿನಿಧಿಸುವ ಮಹನೀಯರು ಮತ್ತು ಆದರ್ಶಗಳಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜದಲ್ಲಿ ಸಂಸ್ಕಾರ, ನೈತಿಕತೆ ಮತ್ತು ಪರಸ್ಪರ ಗೌರವದ ಮನೋಭಾವ ಬೆಳೆಯಬೇಕು ಎಂದು ಕರೆ ನೀಡಿದರು.
ಯತ್ಭಾವಂ ತತ್ಭವ’ ಎಂಬ ತತ್ವವನ್ನು ಉಲ್ಲೇಖಿಸಿದ ಅವರು, ವ್ಯಕ್ತಿಯ ಭಾವನೆ ಮತ್ತು ನಂಬಿಕೆಗಳು ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಭಾರತೀಯ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆ ಪ್ರಮುಖ ಪಾತ್ರವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಶಿಬಿರದಲ್ಲಿ ಆಶ್ರಮದ ಭಕ್ತರು, ಸಾರ್ವಜನಿಕರು ಹಾಗೂ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.