ಮಡಿಕೇರಿ, ಜು. ೩೦: ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್‌ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟಿçÃಯ ಉದ್ಯಾನವನದ ಏಕೈಕ ಮತದಾರನಿಗಾಗಿ ನಿರ್ಮಿಸಲಾದ ಮತಗಟ್ಟೆಗಳ ಮಾದರಿಯಲ್ಲಿ, ಪ್ರತಿ ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಪ್ರತಿ ಕೊಡವ ಅಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಈ ಪ್ರಮುಖ ಬೇಡಿಕೆಯ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಡವ ಭೂಪ್ರದೇಶವು ಪಶ್ಚಿಮ ಘಟ್ಟಗಳ, ಎತ್ತರದ ಗಿರಿಕಂದರಗಳ ಮತ್ತು ಪರ್ವತಮಯ ಭೂಪ್ರದೇಶದಿಂದ ಕೂಡಿದೆ. ಪ್ರತ್ಯೇಕ ಮತಗಟ್ಟೆಗಳನ್ನು ಒದಗಿಸುವ ಮೂಲಕ ಶೇಕಡ ೧೦೦ರಷ್ಟು ಮತದಾನದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ ವಿಧಾನದ ಅಗತ್ಯವಿದೆ. ಭಾರತ ಸರ್ಕಾರದ ಕಲ್ಪನೆಯ “ಒಂದು ಚುನಾವಣೆ, ಒಂದು ಮತ” ದೃಷ್ಟಿಕೋನದತ್ತ ಒಂದು ಹೆಜ್ಜೆ ಮುಂದಿಟ್ಟು, ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ಮತದಾನ ಹಕ್ಕಿನ ವಿಶೇಷ ಪರಿಷ್ಕರಣೆ ಎಸ್‌ಐಆರ್ ಯೋಜನಾಯಾತ್ರೆ ಹಿನ್ನೆಲೆಯಲ್ಲಿ ಕೊಡವರು ಈ ನ್ಯಾಯಸಮ್ಮತ ಸಾಂವಿಧಾನಿಕ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದೆ ಇಡುತ್ತಿದ್ದೇವೆ ಎಂದು ಎನ್.ಯು ನಾಚಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಂದು ಕೊಡವ ವಂಶಾವಳಿ ಪೀಠ (“ಬಲ್ಯಮನೆ” - ಪಾರಂಪರಿಕ ಮನೆಗಳು) ಮತ್ತು ಅಧ್ಯಾತ್ಮಿಕ ಪೀಠಗಳಲ್ಲಿ (“ಮಂದ್” - ಸಮುದಾಯದ ಅಧ್ಯಾತ್ಮಿಕ ಪವಿತ್ರ ಸ್ಥಳಗಳು) ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವುದರಿಂದ ಪಶ್ಚಿಮ ಘಟ್ಟಗಳಲ್ಲಿನ ಕೊಡವ ಸಮುದಾಯಕ್ಕೆ ಮತದಾನದ ಲಭ್ಯತೆ ಹೆಚ್ಚಾಗುತ್ತದೆ. ಭಾರತ ಚುನಾವಣಾ ಆಯೋಗವು ಗಿರ್ ರಾಷ್ಟಿçÃಯ ಉದ್ಯಾನವನ, ಅರುಣಾಚಲ ಪ್ರದೇಶದಂತ ದೂರದ ಸ್ಥಳ ಮತ್ತು ಹಿಮಾಚಲ ಪ್ರದೇಶದಂತ ಎತ್ತರದ ಸ್ಥಳಗಳಿಗೆ ಮತದಾರರಿಗೆ ಈಗಾಗಲೇ ಅನುಕೂಲ ಮಾಡಿಕೊಟ್ಟಿದೆ. ಇದೇ ಸೌಲಭ್ಯವನ್ನು ಕೊಡವರಿಗೂ ವಿಸ್ತರಿಸುವುದು ಕಾಲದ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇ.ಸಿ.ಐ.ನ ಸಾಮಾನ್ಯ ಮಾರ್ಗಸೂಚಿಗಳ ಪ್ರಕಾರ ಮತದಾರನ ನಿವಾಸದಿಂದ ಸಾಮಾನ್ಯವಾಗಿ ೨ ಕಿ.ಮೀ ವ್ಯಾಪ್ತಿಯೊಳಗೆ ಮತಗಟ್ಟೆಯನ್ನು ಸ್ಥಾಪಿಸಬೇಕು ಎಂದಿದೆ. ಇದರಿಂದ ಯಾವ ಮತದಾರನೂ ದೂರದ ಪ್ರಯಾಣ ಮಾಡಬೇಕಾಗಿಲ್ಲ. ಪ್ರತಿಯೊಂದು ಕಾರ್ಯನಿರ್ವಹಿಸುವ ಮತಗಟ್ಟೆಯಲ್ಲಿ ಇ.ಸಿ.ಐ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ತಂಡವಿರಬೇಕು ಎಂದು ಭಾರತೀಯ ಚುನಾವಣಾ ಕಾನೂನುಗಳು ಅಗತ್ಯಪಡಿಸುತ್ತವೆ. ಇವರು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಕಾಲ್ನಡಿಗೆಯಲ್ಲಿ ಅಥವಾ ವಿಶೇಷ ಸಾರಿಗೆಯ ಮೂಲಕ ನಿಗದಿತ ಸ್ಥಳಕ್ಕೆ ಸಾಗಿಸುತ್ತಾರೆ.
ಇ.ಸಿ.ಐ. ಎಲ್ಲಾ ೮೪೨ ಬಲ್ಯಮನೆಗಳು ಮತ್ತು ೩೦೦ ಮಂದ್‌ಗಳಲ್ಲಿ ಪ್ರತ್ಯೇಕ ವಿಶೇಷ ಚುನಾವಣಾ ಮತಗಟ್ಟೆಗಳನ್ನು ಒದಗಿಸಿದರೆ, ಹಬ್ಬದ ವಾತಾವರಣದಲ್ಲಿ ಎಲ್ಲಾ ಕೊಡವರು ಚುನಾವಣಾ ಪ್ರಕ್ರಿಯೆಯಲ್ಲಿ ಶೇಕಡಾ ೧೦೦ ರಷ್ಟು ಭಾಗವಹಿಸುತ್ತಾರೆ. ಆ ಮೂಲಕ, ಅವರು ಚುನಾವಣಾ ವ್ಯವಸ್ಥೆಯನ್ನು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಸಮೃದ್ಧಗೊಳಿಸಲು ಕೊಡುಗೆ ನೀಡುತ್ತಾರೆ
ಆದ್ದರಿಂದ ಚುನಾವಣಾ ಆಯೋಗ ಸಿಎನ್‌ಸಿಯ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆAದು ಎನ್.ಯು. ನಾಚಪ್ಪ ಮನವಿ ಮಾಡಿದ್ದಾರೆ.