ಸೋಮವಾರಪೇಟೆ, ಜು. ೨೯: ಕನ್ನಡ ಸಿರಿ ಸ್ನೇಹ ಬಳಗದ ತಾಲೂಕು ಘಟಕದ ವತಿಯಿಂದ ಗಾನ ಕೋಗಿಲೆ ಎಸ್.ಜಾನಕಿ ಅವರ ಸ್ಮರಣಾರ್ಥ ನೆನಪಿನಂಗಳದ ಗಾಯನ ನುಡಿ ನಮನ ಕಾರ್ಯಕ್ರಮ ಪತ್ರಿಕಾ ಭವನದಲ್ಲಿ ಶನಿವಾರ ನಡೆಯಿತು. ರೋಟರಿ ಅಧ್ಯಕ್ಷ ಬಿ.ಎಸ್ ಸುಂದರ ಕಾರ್ಯಕ್ರಮ ಉದ್ಘಾಸಿದರು. ನಂತರ ಅವರು ಮಾತನಾಡಿ, ಎಸ್ ಜಾನಕಿ ಗಾಯಕಿಯಲ್ಲ, ಭಾರತೀಯ ಸಂಗೀತ ಲೋಕದ ಅಮೂಲ್ಯ ಸಂಪತ್ತು. ಅವರ ಧ್ವನಿ ಎಂದೆAದಿಗೂ ಸಂಗೀತ ಪ್ರಿಯರ ಹೃದಯದಲ್ಲಿ ಜೀವಂತವಾಗಿರುತ್ತದೆ ಎಂದು ಹೇಳಿದರು.
ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ್ ಮಾತನಾಡಿ, ಜಾನಕಿ ಅವರ ಗಾಯನ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇಂತಹ ಮಹಾನ್ ಕಲಾವಿದರನ್ನು ಸ್ಮರಿಸುವ ಕಾರ್ಯಕ್ರಮಗಳು ಗಾಯಕರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಎಚ್.ಜೆ ಜವರಪ್ಪ, ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎ ಮುರಳೀಧರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ ಮಲ್ಲಪ್ಪ ಇದ್ದರು. ಗಾಯಕ ಗಾಯಕಿಯರು ಸುಮಧುರ ಗೀತೆಗಳನ್ನು ಹಾಡಿ ರಂಜಿಸಿದರು. ಶಿಕ್ಷಕಿಯರಾದ ಎಲ್.ಎಂ ಪ್ರೇಮ, ಆಶಾ ಪುಟ್ಟರಾಜು ಕಾರ್ಯಕ್ರಮ ನಿರ್ವಹಿಸಿದರು.