ಬಾಳೆಲೆ ಜು. ೨೯: ಕಾರ್ಮಾಡು ಗ್ರಾಮದಲ್ಲಿ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕುದನೆಕೊಡಿ ಮಣಿ ಬೆಳ್ಳಿಯಪ್ಪ ಘಟನೆಯಿಂದ ಗಾಯಗೊಂಡಿದ್ದಾರೆ. ಮಣಿ ಅವರ ತಾಯಿ ಬೋಜಮ್ಮ ವಾಸವಿರುವ ಮನೆಯ ಸಮೀಪದಿಂದ ತೆರಳುತ್ತಿದ್ದ ವೇಳೆ ಏಕಾಏಕಿ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಕುಸಿದು ಅವರ ಮೇಲೆ ಬಿದ್ದಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಧಾವಿಸಿ ಅವಶೇಷಗಳಡಿ ಸಿಲುಕಿದ್ದ ಮಣಿ ಬೆಳ್ಳಿಯಪ್ಪ ಅವರನ್ನು ರಕ್ಷಿಸಿ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಕಳೆದ ವರ್ಷದ ಭಾರಿ ಮಳೆಯಿಂದ ಇದೇ ಮನೆಯ ಒಂದು ಭಾಗ ಕುಸಿದಿದ್ದು, ಕಂದಾಯ ಇಲಾಖೆ ಸ್ಥಳ ಮಹಜರು ನಡೆಸಿತ್ತು. ಆದರೆ ಇದುವರೆಗೆ ಯಾವುದೇ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ ಎಂದು ಗಾಯಾಳುವಿನ ಪುತ್ರಿ ಪೂಜಾ ಬೆಳ್ಳಿಯಪ್ಪ ಆರೋಪಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಆಗಮಿಸಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ತನಿಖೆಯಲ್ಲಿ, ಪರಿಹಾರಕ್ಕಾಗಿ ನೈಜ ಫಲಾನುಭವಿ ಬೋಜಮ್ಮ ಅವರ ಹೆಸರಿನಲ್ಲಿ ಪ್ರಸ್ತಾವನೆ ಸಲ್ಲಿಸುವ ಬದಲಿಗೆ ಮಣಿ ಬೆಳ್ಳಿಯಪ್ಪ ಅವರ ಪತ್ನಿ ತಾಯಮ್ಮ ಅವರ ಹೆಸರಿನಲ್ಲಿ ಶಿಫಾರಸು ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತಾಯಮ್ಮ ಅವರಿಗೆ ಈ ಹಿಂದೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ನಿರ್ಮಿಸಿಕೊಡಲಾಗಿದ್ದ ಕಾರಣ ತಾಂತ್ರಿಕ ಕಾರಣಗಳಿಂದ ಪರಿಹಾರ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಲಾದರೂ ವಯೋವೃದ್ಧೆ ಬೋಜಮ್ಮ ಅವರ ಹೆಸರಿನಲ್ಲಿ ಅರ್ಜಿ ಸ್ವೀಕರಿಸಿ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಹಾಗೂ ಹಾನಿಗೊಳಗಾದ ಕುಟುಂಬಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.