ಸೋಮವಾರಪೇಟೆ : ಇಲ್ಲಿನ ಜೈಜವಾನ್ ಮಾಜಿ ಯೋಧÀರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಕೀಲರಾದ ನಿಧಿ ಲಿಂಗಪ್ಪ ಮಾತನಾಡಿ, ದೇಶದೊಳಗೆ ಒಗ್ಗಟ್ಟಿರಬೇಕು. ಜಾತಿ ಧರ್ಮಗಳ ನಡುವೆ ತಿಕ್ಕಾಟ ನಿಲ್ಲಿಸಬೇಕು. ಶಿಕ್ಷಣ ಕೇವಲ ಪುಸ್ತಕಗಳಿಗೆ ಮೀಸಲಾಗಬಾರದು. ವಿದ್ಯಾರ್ಥಿಗಳ ಮನಸ್ಸನ್ನು ಸಧೃಡಗೊಳಿಸಿದಲ್ಲಿ ಮಕ್ಕಳ ಮನಸ್ಥಿತಿ ಬದಲಾಗುತ್ತದೆ. ದೇಶವನ್ನು ಒಗ್ಗಟ್ಟಾಗಿ ಇಡಲು ಪರಸ್ಪರ ಗೌರವ ನೀಡುವ ಮನೋಭಾವ ಬೆಳೆಸಬೇಕು. ದೇಶದೊಳಗೆ ದೇಶವಿರೋಧಿ ಮನಸ್ಥಿಯನ್ನು ಮಟ್ಟಹಾಕಿ, ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದರು. ಜೈಜವಾನ್ ಮಾಜಿ ಯೋಧÀರ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ಸೈನಿಕರು ತಮ್ಮ ಸೇವಾವಧಿ ಮುಗಿದ ನಂತರ ಸುಮ್ಮನಾಗದೆ, ಸಮಾಜಕ್ಕೆ ಮತ್ತು ದೇಶಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಪೋಷಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ತಿಳಿಹೇಳುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಬೋಜೇಗೌಡ ಮತ್ತು ಪದಾಧಿಕಾರಿಗಳು, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮತ್ತು ಪದಾಧಿಕಾರಿಗಳು, ಮೋಟಾರು ಮಾಲೀಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.