ವೀರಾಜಪೇಟೆ, ಜು. ೨೮: ಸಂಚಾರ ನಿಯಮಗಳ ಪಾಲನೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ವೀರಾಜಪೇಟೆಯ ಪೊಲೀಸ್ ಅಧಿಕಾರಿಗಳು ಆಟೋ ಚಾಲಕರ ದಾಖಲೆಗಳ ಪರಿಶೀಲನೆ ನಡೆಸಿದರು.

ಸಾರ್ವಜನಿಕ ಪ್ರಯಾಣಿಕರ ಭದ್ರತೆ, ಸಂಚಾರಿ ನಿಯಮ, ವಾಹನ ದಟ್ಟಣೆ ಹಾಗೂ ನಗರದ ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಇತ್ತೀಚೆಗೆ ಉಪಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯಲ್ಲಿ ಆಟೋ ಚಾಲಕರ ವಿಶೇಷ ಸಭೆಯನ್ನು ಕರೆದು ಸಲಹೆ ಸೂಚನೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಹಾಗೂ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನಿರ್ದೇಶನದಂತೆ, ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ನೇತೃತ್ವದಲ್ಲಿ ಅಪರಾಧ ವಿಭಾಗದ ಎಸ್‌ಐ ಕಾವೇರಪ್ಪ ಹಾಗೂ ಪೊಲೀಸ್ ಸಿಬ್ಬಂದಿ ವೀರಾಜಪೇಟೆಯ ವಿವಿಧ ಆಟೋ ನಿಲ್ದಾಣಗಳಲ್ಲಿ ಆಟೋ ಚಾಲಕರ ದಾಖಲೆಗಳ ಪರಿಶೀಲನೆ ನಡೆಸಿದರು.

ರಾತ್ರಿ ವೇಳೆಯಲ್ಲೂ ಸ್ಥಳೀಯ ಮಟನ್ ಮಾರ್ಕೆಟ್ ಆಟೋ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆಟೋ ಚಾಲಕರ ಲೈಸೆನ್ಸ್, ಆರ್‌ಸಿ, ಇನ್ಶೂರೆನ್ಸ್ ಹಾಗೂ ಎಮಿಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸಿದರು.

ಶೀಘ್ರದಲ್ಲೇ ಆಟೋಗಳಿಗೆ ಜಿಪಿಎಸ್ ನಂಬರ್ ಅಳವಡಿಕೆ

ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಆಟೋ ರಿಕ್ಷಾಗಳಿಗೆ ಜಿಪಿಎಸ್ ನಂಬರ್ ಕಡ್ಡಾಯವಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಾಧ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಾಲಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಈ ಸಂದರ್ಭ ಪೊಲೀಸರು ಜಾಗೃತಿ ಮೂಡಿಸಿದರು.