ಗೋಣಿಕೊಪ್ಪಲು, ಜು. ೨೮: ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿಯ ಬೆಮ್ಮತ್ತಿ ಗ್ರಾಮದ ‘ನೆರಳು’ ಯೂತ್ ಪೌಂಡೇಷನ್ ವತಿಯಿಂದ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು.

ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನೂರಾರು ಮಕ್ಕಳಿಗೆ ಉಚಿತ ಕೊಡೆಗಳನ್ನು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.

ಸಮಾರಂಭವನ್ನು ಉದ್ದೇಶಿಸಿ ನೆರಳು ಯೂತ್ ಪೌಂಡೇಷನ್ ಸಂಚಾಲಕರಾದ ಆಸಿಫ್ ಮಾತನಾಡಿ, ನೆರಳು ಸಂಸ್ಥೆಯು ಕಳೆದ ೬ ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬರುತ್ತಿದೆ. ಆರಂಭದಲ್ಲಿ ೧೦ ಯುವಕರಿಂದ ಪ್ರಾರಂಭವಾದ ಸಂಸ್ಥೆಯು ಇಂದಿಗೆ ೮೦ ಯುವಕರನ್ನು ಹೊಂದಿದೆ. ಸಂಸ್ಥೆಯ ವತಿಯಿಂದ ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯಹಸ್ತ ನೀಡುವುದು, ಆಹಾರ ಕಿಟ್‌ಗಳನ್ನು ಸಂದರ್ಭಕ್ಕೆ ಸರಿಯಾಗಿ ಕಷ್ಟದಲ್ಲಿ ಇರುವ ಕುಟುಂಬಗಳಿಗೆ ನೀಡುವುದನ್ನು ಮಾಡುತ್ತ ಬರುತ್ತಿದ್ದೇವೆ. ಜಾ-ಮತ, ಬೇಧವಿಲ್ಲದೆ ಸಮಾಜ ಸೇವೆಯಲ್ಲಿ ಸಂಸ್ಥೆಯು ಕೆಲಸ ನಿರ್ವಹಿಸುತ್ತಿದೆ ಎಂದರು. ಶಾಲೆಯ ಸಲಹಾ ಸಮಿತಿಯ ಗಣ್ಯರಾದ ಸಣ್ಣುವಂಡ ವಿಶ್ವನಾಥ್ ಮಾತನಾಡಿ, ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಅನುಕೂಲ ವಾಗಲು ಉತ್ತಮ ಗುಣಮಟ್ಟದ ಕೊಡೆಗಳನ್ನು ವಿತರಿಸಿರುವುದು ಶ್ಲಾಘನೀಯ. ಸದಾ ಸಮಾಜಮುಖಿ ಕಾರ್ಯದಲ್ಲಿ ನೆರಳು ಸಂಸ್ಥೆಯು ತೊಡಗಿಸಿಕೊಂಡಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಸಿ ಜಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಎಂ.ಟಿ ಸುಮ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಲಹಾ ಸಮಿತಿಯ ಸದಸ್ಯರುಗಳಾದ ಪುಚ್ಚಿಮಾಡ ರಾಯ್ ಮಾದಪ್ಪ, ಸಿ.ಕೆ ಚಿಣ್ಣಪ್ಪ, ಗಿರೀಶ್, ಶಿಕ್ಷಕರಾದ ಡಿ.ಯು ರಾಗಿಣಿ, ಎಂ.ಟಿ ಸತ್ಯ, ಎಂ.ಕೆ ಲೀಲಾ, ಕೆ.ಬಿ ಪುಷ್ಪ, ಕೆ.ವಿ ಲಾಯ್ಡ್, ಎ ಲಾವಣ್ಯ, ನೆರಳು ಯೂತ್ ಪೌಂಡೇಷನ್‌ನ ಅಧ್ಯಕ್ಷರಾದ ಮುಬೀರ್, ಮುಖ್ಯ ಸಂಚಾಲಕ ಎನ್.ಎನ್ ಆಸಿಫ್, ಕಾರ್ಯದರ್ಶಿ ಉಮ್ಮರ್, ಖಜಾಂಚಿ ಕೆ.ಎಂ ರಿಯಾನ್, ನಿರ್ದೆಶಕರುಗಳಾದ ಹುಸೈನಾರ್, ಮುನೀರ್ ಶಾಫಿ ಮುಂತಾದವರು ಉಪಸ್ಥಿತರಿದ್ದರು.