ಸಿದ್ದಾಪುರ, ಜು. ೨೬: ಮಾಲ್ದಾರೆ ಸಮೀಪದ ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಗದ್ದಿಗೆ ಬೆಟ್ಟ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯಾರೋ ಕಿಡಿಗೇಡಿಗಳು ದೇವಾಲಯದ ಬದಿಯಲ್ಲಿ ಗೋರಿ ನಿರ್ಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಶ್ರೀ ಸಿದ್ದೇಶ್ವರ ದೇವಾಲಯದ ಆಡಳಿತ ಮಂಡಳಿಯವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದ ಒಳಗಿರುವ ಪ್ರಾಚೀನ ಕಾಲದ ಗದ್ದಿಗೆ ಬೆಟ್ಟದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರದಂದು ಹೊರ ಜಿಲ್ಲೆಯ ಅನ್ಯಕೋಮಿನ ಯಾರೋ ಕಿಡಿಗೇಡಿಗಳು ಎರಡು ವಾಹನಗಳಲ್ಲಿ ಆಗಮಿಸಿ ದೇವಾಲಯದ ಬದಿಯಲ್ಲಿ ಗೋರಿ ನಿರ್ಮಾಣ ಮಾಡಿ ಪೂಜೆ ಸಲ್ಲಿಸಿದ್ದಾರೆ. ಈ ಕೃತ್ಯವೆಸಗಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕೆAದು ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಒತ್ತಾಯಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಗದ್ದಿಗೆ ಬೆಟ್ಟ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.