ನಾಪೋಕ್ಲು, ಜು. ೨೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ೨೦೨೭ ರ ಏಪ್ರಿಲ್ ೨ ರಿಂದ ೯ ರವರಿಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಜನಾಬ್ ಹುಸೈನ್ ಸಖಾಫಿ, ಹೇಳಿದರು.

ಎಮ್ಮೆಮಾಡು ದರ್ಗಾದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಾಹಿದರ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಮುಂದಿನ ವರ್ಷದ ಉರೂಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಶುಕ್ರವಾರ ನಮಾಜ್ ಬಳಿಕ ದಫ್ ಕಾರ್ಯಕ್ರಮದೊಂದಿಗೆ ದರ್ಗಾಕ್ಕೆ ತೆರಳಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರೂಸ್ ಮಾಹಿತಿ ನೀಡಿದರು. ಈ ಸಂದರ್ಭ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಝಕರಿಯ ಸಅದಿ, ಎಮ್ಮೆಮಾಡು ಖತೀಬ್ ರಾಝಿಕ್ ಫೈಝಿ, ಜಮಾಅತ್ ಸಮಿತಿ ಸದಸ್ಯರು, ಶಹೀದಿಯ ಅನಾಥಾಲಯ ಅಧ್ಯಕ್ಷರು ಸಮಿತಿ ಸದಸ್ಯರು ಹಾಗೂ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು. ಪ್ರಾರ್ಥನೆ ಸೈಯ್ಯದ್ ಇಲ್ಯಾಸ್ ಸಖಾಫಿ ತಂಙಳ್ ನೆರೆವೇರಿಸಿದರು.