ವೀರಾಜಪೇಟೆ, ಜು. ೨೪: ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಯಲು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ನಿರ್ದೇಶನದಂತೆ ವೀರಾಜಪೇಟೆ ನಗರ ಪೋಲಿಸ್ ಠಾಣೆ ವತಿಯಿಂದ ಜಾಗೃತಿ ಅಭಿಯಾನ ನಡೆಯಿತು. “ನಶೆಯಲ್ಲಿ ಸ್ವಾಗ್ ಇಲ್ಲ” ಎಂಬ ಯುವ ಸ್ನೇಹಿ ಘೋಷಣೆಗಳೊಂದಿಗೆ ವೀರಾಜಪೇಟೆ ಆಟೋ ಚಾಲಕರು ವೀರಾಜಪೇಟೆ ಪಟ್ಟಣದಲ್ಲಿ ಮಾದಕ ವಸ್ತುಗಳ ವಿರುದ್ಧ ವಿಶೇಷ ಜಾಗೃತಿ ಮೂಡಿಸಿದರು. “ಸೇ ಎಸ್ ಟು ಲೈಫ್, ನೋ ಟು ಡ್ರಗ್ಸ್” ಎಂಬ ಘೋಷಣೆಯೊಂದಿಗೆ “ಬೇಡ ಬ್ರೋ” ಸಂದೇಶದ ಮೂಲಕ ಯುವಕರಿಗೆ ನೇರವಾಗಿ ತಲುಪುವ ಪ್ರಯತ್ನ ಮಾಡಲಾಯಿತು.
ವೀರಾಜಪೇಟೆಯ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಮಾತನಾಡಿ, ಮಾದಕ ವ್ಯಸನ ಕೇವಲ ಕಾನೂನು ಸಮಸ್ಯೆ ಅಲ್ಲ. ಇದು ಇಡೀ ಕುಟುಂಬ ಮತ್ತು ಸಮಾಜದ ಸಮಸ್ಯೆ. ಯುವಕರು ಒತ್ತಡ, ಕುತೂಹಲಕ್ಕೆ ಒಳಗಾಗಿ ಡ್ರಗ್ಸ್ ಕಡೆ ಹೋಗುತ್ತಿದ್ದಾರೆ. ಸ್ನೇಹಿತನಂತೆ ‘ಬೇಡ ಬ್ರೋ’ ಎಂದು ಹೇಳುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು. ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಗಾಂಜಾ, ಎಂ.ಡಿ.ಎA.ಎ, ಸಿರಪ್ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿವೆ. ಇದನ್ನು ತಡೆಯಲು ಸಾಂಪ್ರದಾಯಿಕ ವಿಧಾನದ ಜೊತೆಗೆ ಯುವ ಸ್ನೇಹಿ ಡಿಜಿಟಲ್ ಪ್ರಚಾರವೂ ಅಗತ್ಯವಾಗಿದೆ. ಮಾದಕ ವ್ಯಸನದಿಂದ ಭವಿಷ್ಯ, ಆರೋಗ್ಯ, ಕುಟುಂಬ ಎಲ್ಲವೂ ನಾಶವಾಗುತ್ತದೆ. ಶಿಕ್ಷಣ, ಗುರಿ, ಸಫಲತೆ, ಸಂತೋಷ, ಉತ್ತಮ ಭವಿಷ್ಯದ ಕಡೆಗೆ ಯುವಕರು ಗಮನ ಹರಿಸಬೇಕು. ವಿದ್ಯಾರ್ಥಿಗಳ ಕನಸುಗಳು ಮಾದಕ ವಸ್ತುಗಳಿಗಿಂತ ಹೆಚ್ಚು ಮೌಲ್ಯಯುತವಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಮಾದಕ ಪದಾರ್ಥಗಳಿಂದ ದೂರವಿರುವಂತೆ ಸಲಹೆ ನೀಡಿದರು. ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಡ್ರಗ್ಸ್ ಮಾರಾಟ, ಸಾಗಾಣಿಕೆಯಲ್ಲಿ ಆಟೋಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು. ಉಲ್ಲಂಘಿಸಿದರೆ ಪರವಾನಗಿ ರದ್ದು ಜೊತೆಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಾಲಾ-ಕಾಲೇಜು ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಚಾಲಕರೇ ಜಾಗೃತಿ ಮೂಡಿಸಬೇಕು ಎಂದು ಕೋರಿದರು.
ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮಾತನಾಡಿ, ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಬಗ್ಗೆ ಮಾಹಿತಿ ಇದ್ದರೆ ಹೆಸರು ಬಹಿರಂಗಪಡಿಸದೆ ದೂರು ನೀಡಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರಲ್ಲದೆ ಮಾದಕ ಮುಕ್ತ ಕೊಡಗು ನಮ್ಮೆಲ್ಲರ ಗುರಿ. ಅನುಮಾನಾಸ್ಪದ ಚಟುವಟಿಕೆ ಕಂಡಲ್ಲಿ ಕೂಡಲೇ ೧೧೨ಗೆ ಮಾಹಿತಿ ನೀಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವೀರಾಜಪೇಟೆ ನಗರದ ಆಟೋ ಚಾಲಕರು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.