ಗೋಣಿಕೊಪ್ಪ, ಜು.೨೪: ಬಿಡದಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೊಡಗಿನಿಂದ ತೆರಳುತ್ತಿದ್ದ ರೈತರನ್ನು ಪೊಲೀಸರು ತಿತಿಮತಿಯಲ್ಲಿ ತಡೆದು ಬಂಧಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆಯಿತು.

ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ನೂರಾರು ಪದಾಧಿಕಾರಿಗಳು ಶುಕ್ರವಾರ ಮುಂಜಾನೆಯ ವೇಳೆ ಬಸ್ಸಿನಲ್ಲಿ ಬೆಂಗಳೂರಿನ ಬಿಡದಿ ಬಳಿಗೆ ಪ್ರಯಾಣ ಬೆಳೆಸಲು ಯತ್ನಿಸಿದರು. ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಎರಡು ಬಸ್‌ಗಳಲ್ಲಿ ಹೊರಟಿದ್ದ ರೈತರನ್ನು ತಿತಿಮತಿ ಮುಖ್ಯರಸ್ತೆಯಲ್ಲಿ ಪೊಲೀಸರು ತಡೆದರು. ಹೋರಾಟದಲ್ಲಿ ಭಾಗವಹಿಸದಂತೆ ಮನವಿ ಮಾಡಿದರೂ ರೈತರು ಮುಂದುವರಿಯಲು ಯತ್ನಿಸಿದರು. ಪ್ರತಿಭಟನಾ ಸ್ಥಳಕ್ಕೆ ತೆರಳಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ರೈತರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ತಪಾಸಣೆ ಗೇಟ್ ಸಮೀಪದ ಮಜ್ಜಿಗೆಹಳ್ಳದಲ್ಲಿ ಮಿನಿ ಬಸ್‌ಅನ್ನು ತಡೆದ ಪೊಲೀಸರು, ಬಳಿಕ ಪೊನ್ನಂಪೇಟೆ-ಕೋಣನಕಟ್ಟೆ ಮಾರ್ಗವಾಗಿ ತಿತಿಮತಿಗೆ ಬಂದ ಮತ್ತೊಂದು ಬಸ್‌ನನ್ನೂ ತಡೆದರು. ಒಟ್ಟು ೧೨೦ಕ್ಕೂ ಹೆಚ್ಚು ರೈತರು ತಿತಿಮತಿಯಲ್ಲಿ ಸೇರಿದ್ದರು. ಪೊಲೀಸರ ಕ್ರಮವನ್ನು ಖಂಡಿಸಿದ ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳು ಹಾಗೂ ಯೋಜನೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದರು. ನಾವು ಬಿಡದಿ ಪ್ರತಿಭಟನೆಗೆ ತೆರಳಿಯೇ ತೆರಳುತ್ತೇವೆ ಎಂದು ಪಟ್ಟುಹಿಡಿದ ರೈತರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.

ರೈತರ ಮನವಿಗೆ ಮಣಿಯದ ಪೊಲೀಸರ ನಡೆಯನ್ನು ಖಂಡಿಸಿ ರೈತರು ಪ್ರತಿಭಟನೆಗೆ ಮುಂದಾದರು. ಬೆಳಿಗ್ಗೆ ೬.೪೦ರಿಂದ ೯.೪೫ ರವರೆಗೆ ನಡೆದ ಈ ಬೆಳವಣಿಗೆಯ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ತಿತಿಮತಿ - ಮೈಸೂರು ಮಾರ್ಗದಲ್ಲಿ ವಾಹನಗಳ ಉದ್ದನೆಯ ಸರತಿ ನಿರ್ಮಾಣವಾಗಿದ್ದು, ಪ್ರಯಾಣಿಕರು, ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತುರ್ತು ಸೇವೆಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಆದರೆ, ಪ್ರತಿಭಟನೆಯ ನಡುವೆಯೂ ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆAಬ ಉದ್ದೇಶದಿಂದ ರೈತರು ಶಾಲಾ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡುವ ಮೂಲಕ ಮಾನವೀಯತೆ ಮೆರೆದರು.

ಬೆಳಿಗ್ಗೆ ಸುಮಾರು ೯.೨೦ಕ್ಕೆ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಪ್ರತಿಭಟನಾ ಸ್ಥಳದಿಂದ ಕುಶಾಲನಗರದ ಕೂಡಿಗೆ ಕೊಡವ ಸಮಾಜಕ್ಕೆ ಕರೆದೊಯ್ದರು. ಬಳಿಕ ರಸ್ತೆ ಸಂಚಾರ ಸಹಜ ಸ್ಥಿತಿಗೆ ಮರಳಿತು. ಪ್ರತಿಭಟನೆಯಲ್ಲಿ ಮಹಿಳಾ ರೈತರು ಭಾಗವಹಿಸಿ ಗಮನ ಸೆಳೆದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ರೈತರು ಕಾನೂನು ಸುವ್ಯವಸ್ಥೆಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಂಗ ತರುವವರಲ್ಲ. ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಟಕ್ಕೆ ತೆರಳುತ್ತಿದ್ದೆವು. ಆದರೆ ಸರ್ಕಾರ ಮತ್ತು ಪೊಲೀಸರು ನಮ್ಮನ್ನು ತಡೆದು ದೌರ್ಜನ್ಯ ಎಸಗಿದ್ದಾರೆ. ಹೋರಾಟಕ್ಕೆ ತೆರಳುವ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಸತ್ತಾತ್ಮಕ ಹಕ್ಕುಗಳ ಹತ್ತಿಕ್ಕುವಿಕೆಯಾಗಿದ್ದು, ಸರ್ಕಾರದ ಈ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪದಾಧಿಕಾರಿಗಳಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಚಟ್ಟಂಗಡ ಕಂಬ ಕಾರ್ಯಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಚೆಪ್ಪುಡೀರ ಕಾರ್ಯಪ್ಪ ಸೇರಿದಂತೆ ಇತರರು ಹಾಜರಿದ್ದರು.

ತಾಲೂಕು ಉಪ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್, ಅನುಪ್ ಮಾದಪ್ಪ, ಠಾಣಾಧಿಕಾರಿ ಕಾಳೇಗೌಡ, ನವೀನ್ ಕುಮಾರ್ ಸೇರಿದಂತೆ ೯೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬೆಳಿಗ್ಗೆ ೬ ಗಂಟೆಯಿAದಲೇ ತಿತಿಮತಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನಾಗರಿಕರ ಅಸಮಾಧಾನ

ತಿತಿಮತಿ ಬಳಿಯ ಮಜ್ಜಿಗೆಹಳ್ಳದ ಬಳಿಯಲ್ಲಿ ತಿತಿಮತಿ ಮಾರ್ಗವಾಗಿ ತೆರಳಬೇಕಾಗಿದ್ದ ಬಸ್‌ಅನ್ನು ಪೊಲೀಸರು ತಡೆದ ಪರಿಣಾಮ ಬಸ್ಸಿನಲ್ಲಿದ್ದ ಶಿಕ್ಷಕರು, ವಿದ್ಯಾರ್ಥಿಗಳು ಪೊಲೀಸರ ಮೇಲೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಾರ್ವಜನಿಕರ ಹಾಗೂ ಪೋಲಿಸರ ನಡುವೆ ವಾಗ್ವಾದ ನಡೆಯಿತು. ನಂತರ ಎರಡು ಸರ್ಕಾರಿ ಬಸ್‌ಗಳನ್ನು ತಿತಿಮತಿ ಭಾಗಕ್ಕೆ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.

ಎಸ್‌ಪಿಗೆ ಮನವಿ

ಹೋರಾಟಕ್ಕೆ ತೆರಳಿದ ಸಂದರ್ಭ ರೈತರನ್ನು ಬಂಧಿಸಿರುವದನ್ನು ಖಂಡಿಸಿ ರೈತ ಸಂಘ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಂಧಿಸಿ ೬ ಗಂಟೆಗಳ ಕಾಲ ಆಹಾರ ನೀಡದೆ ದಿಗ್ಭಂದನದಲ್ಲಿಟ್ಟಿರುವುದು ಸರಿಯಲ್ಲ. ಹೋರಾಟವನ್ನು ಹತ್ತಿಕ್ಕಲು ಸರಕಾರ ಆದೇಶಿಸಿದ್ದರೆ ಅದನ್ನು ನೀಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಬಿಡದಿಗೆ ತೆರಳಲು ಬಸ್ ಗೆ ಬಾಡಿಗೆ ನೀಡಿದ್ದು, ಅದನ್ನು ಇಲಾಖೆ ಹಿಂದಿರುಗಿಸುವAತೆ ಆಗ್ರಹಿಸಿದರು.

ಎನ್.ಎನ್ ದಿನೇಶ್, ಹೆಚ್.ಕೆ ಜಗದೀಶ್