ಕಡಂಗ, ಜು.೨೪: ಎಸ್‌ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್-ಅರಮೇರಿ ಶಾಲೆಯ ಇಬ್ಬರು ಎನ್‌ಸಿಸಿ ಕೆಡೆಟ್‌ಗಳು ರಾಜ್ಯಮಟ್ಟದ ಪ್ರತಿಷ್ಠಿತ ಎನ್‌ಸಿಸಿ ಶಿಬಿರಗಳಿಗೆ ಆಯ್ಕೆಯಾಗಿದ್ದಾರೆ.

ಕಾರ್ಪೊರಲ್ ಕೆಲ್ವಿನ್ ಅಪ್ಪಯ್ಯ ಎಂ. ಬಿ. ಅವರು ಬಳ್ಳಾರಿ ಜಿಲ್ಲೆಯ ತೋರನಗಲ್ಲುದಲ್ಲಿ ನಡೆಯುತ್ತಿರುವ ಇಂಟರ್ ಗ್ರೂಪ್ ಶೂಟಿಂಗ್ ಕ್ಯಾಂಪ್‌ನ ಫೈರಿಂಗ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಿಖರ ಗುರಿ ಸಾಧನೆ, ಶೂಟಿಂಗ್ ಕೌಶಲ್ಯ ಹಾಗೂ ಶಿಸ್ತಿನ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ.

ಸಾರ್ಜೆಂಟ್ ತಶ್ವಿಕಾ ಮೊಣ್ಣಪ್ಪ ಕೆ. ಅವರು ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಆರ್‌ಡಿಸಿ-೧ (ರಿಪಬ್ಲಿಕ್ ಡೇ ಕ್ಯಾಂಪ್ ೧)ಶಿಬಿರದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಶಿಬಿರವು ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಹತ್ವದ ತರಬೇತಿಯನ್ನು ನೀಡುವ ಪ್ರತಿಷ್ಠಿತ ಎನ್‌ಸಿಸಿ ಶಿಬಿರವಾಗಿದೆ.

ಇಬ್ಬರೂ ಕೆಡೆಟ್‌ಗಳು ೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ-ಮಡಿಕೇರಿ ಘಟಕಕ್ಕೆ ಸೇರಿದವರಾಗಿದ್ದು, ಎಸ್‌ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್-ಅರಮೇರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ಇವರು ಎಎನ್‌ಒ ಸೆಕೆಂಡ್ ಆಫೀಸರ್ ಪ್ರತಿಮಾ ಪಿ. ಎ. ಹಾಗೂ ಪಿ. ಐ ಸ್ಟಾಫ್ ಆಗಿರುವ ಅಮ್ಮಣಿಚಂಡ ಲವಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಈ ಶಿಬಿರಗಳಿಗೆ ಆಯ್ಕೆಯಾಗಿದ್ದಾರೆ.