ಮಡಿಕೇರಿ, ಜು. ೨೪: ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಪಿ.ಆರ್ ಅವರು ಆಗಮಿಸಿದ್ದರು. ಇವರು ಆಯ್ಕೆಯಾದ ಪದಾಧಿಕಾರಿಗಳಿಗೆ ಹಾಗೂ ತರಗತಿ ಪ್ರತಿನಿಧಿಗಳಿಗೆ ಪದಗ್ರಹಣ ಜೊತೆಯಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ಉತ್ತಮ ನೈತಿಕ ಮೌಲ್ಯಗಳ ಜೊತೆಯಲ್ಲಿ ತಮ್ಮ ತಂದೆ - ತಾಯಿಯರಿಗೆ ನೋಯಿಸದೆ ಆಸೆ-ಕನಸುಗಳನ್ನು ಈಡೇರಿಸಬೇಕೆಂದರು. ಗುರುಗಳಿಗೆ ಸದಾ ಗೌರವ ತೋರಿಸಿ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಕರೆ ನೀಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಗೋಣಿಕೊಪ್ಪ ಕಾವೇರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಪಿ ಬೋಪಣ್ಣ ಅವರು ಗುರುಗಳ ಸಲಹೆ, ಮಾರ್ಗದರ್ಶನದ ಮೂಲಕ ನಡೆದಾಗ ಮಾತ್ರ ಶಿಕ್ಷಣಕ್ಕೆ ಮಹತ್ವವಿರುತ್ತದೆ ಎಂದರು. ಪ್ರಚಲಿತ ವಿದ್ಯಮಾನ, ಘಟನೆಗಳನ್ನು ಅಭ್ಯಸಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ಕರೆ ಕೊಟ್ಟರು.
ಈ ಸಂದರ್ಭ ೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಫರೀದಾ ಎಂ.ಎಸ್ ವಾಣಿಜ್ಯ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದಿದ್ದು ಅವರಿಗೆ ಸೇರಿದಂತೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಚೈತ್ರ ಬಿ.ಎಸ್, ಮಾನ್ವಿ ಎಂ.ಎಸ್ ಹಾಗೂ ಪ್ರತೀಕ್ಷಾ ವಿ.ಪಿ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ನಕಿಯಾ ಭಾನು, ಪದವಿ ಕಾಲೇಜಿನ ಪ್ರಾಂಶುಪಾಲರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಉಪಸ್ಥಿತರಿದ್ದರು.
ವೀಣಾ ಮತ್ತು ತಂಡದವರು ಪ್ರಾರ್ಥಿಸಿದರು, ಪ್ರಾಂಶುಪಾಲೆ ಎಂ.ಕೆ ಪದ್ಮ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ವೀಣಾ, ಆವಂದಿ, ಆಶಿತಾ ಹಾಗೂ ಕೆ. ಪಿ ಗಾಯತ್ರಿ ತಿಮ್ಮಯ್ಯ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಎಂ.ಪಿ ದಮಯಂತಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಡೈನಾ ಸೋಮಯ್ಯ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.