ಕಣಿವೆ, ಜು. ೨೪: ಮಕ್ಕಳ ಸಂಸ್ಕಾರ ಹಾಗೂ ಬಾಲ್ಯದ ಶಿಕ್ಷಣಕ್ಕೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸಂಪೂರ್ಣ ಆಧುನಿಕ ಹಾಗೂ ಶಿಶುಸ್ನೇಹಿ ರೂಪ ನೀಡಿದೆ.
ಪಂಚಾಯಿತಿಯ ಕ್ರಮದಿಂದಾಗಿ ಇಂದು ಈ ಅಂಗನವಾಡಿ ಕೇಂದ್ರವು ಸುಸಜ್ಜಿತ, ನವೀನ ಹಾಗೂ ಆಕರ್ಷಕ ವಾತಾವರಣದೊಂದಿಗೆ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆ ಮತ್ತು ಆಟದ ವಾತಾವರಣವನ್ನು ಆಹ್ಲಾದಕರಗೊಳಿಸಲು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಿದೆ.
ಆಕರ್ಷಕ ಹಾಗೂ ಸುರಕ್ಷಿತ ವಾತಾವರಣ
ಅಂಗನವಾಡಿಯ ಗೋಡೆಗಳಿಗೆ ಚಿತ್ತಾರಗಳಿಂದ ಕೂಡಿದ ಮನಮೋಹಕ ಬಣ್ಣ ಬಳಿಯಲಾಗಿದ್ದು, ಶುಚಿತ್ವದಿಂದ ಕೂಡಿದ ನೆಲ (ಫ್ರೆಂಚ್ ಶೈಲಿಯ ಸುಂದರ ಫ್ಲೋರಿಂಗ್) ಹಾಗೂ ಮಕ್ಕಳಿಗೆ ಗಾಯವಾಗದಂತೆ ಗುಣಮಟ್ಟದ ಫ್ಲೋರ್ ಮ್ಯಾಟ್ಗಳನ್ನು ಅಳವಡಿಸಲಾಗಿದೆ.
ಶಿಶುಸ್ನೇಹಿ ಸೌಕರ್ಯಗಳು: ಮಕ್ಕಳಿಗೆ ಕುಳಿತುಕೊಳ್ಳಲು ಅನುಕೂಲಕರವಾದ ರಂಗಿನ ಕುರ್ಚಿ-ಮೇಜುಗಳು, ಆಧುನಿಕ ಆಟಿಕೆಗಳು ಮತ್ತು ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಆಧುನಿಕ ಶಿಕ್ಷಣಕ್ಕೆ ಆದ್ಯತೆ : ಡಿಜಿಟಲ್ ಕಲಿಕೆಗೆ ಪೂರಕವಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಟೆಲಿವಿಷನ್ (Smಚಿಡಿಣ ಖಿಗಿ) ವ್ಯವಸ್ಥೆ ಮಾಡಲಾಗಿದ್ದು, ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಮಕ್ಕಳು ಸುಲಭವಾಗಿ ಕಲಿಯಲು ಹಾದಿ ಸುಗಮವಾಗಿದೆ.
ಆರೋಗ್ಯ ಮತ್ತು ನೈರ್ಮಲ್ಯ : ತಂಪಾದ ಗಾಳಿಗೆ ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ನೈರ್ಮಲ್ಯದಿಂದ ಕೂಡಿದ ಅಡುಗೆ ಮನೆ ಮತ್ತು ಮಕ್ಕಳು ಬಳಸಲು ಅನುಕೂಲಕರವಾದ ಬಾಲಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಅಂಗನವಾಡಿಯ ಈ ಅಭೂತಪೂರ್ವ ಬದಲಾವಣೆಯಿಂದಾಗಿ ಗ್ರಾಮದ ಮಕ್ಕಳು ಮತ್ತು ಪೋಷಕರಲ್ಲಿ ಸಂತಸದ ಹೊನಲು ಹರಿದಿದೆ. ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪ್ರೇರಕವಾಗಿರುವ ಈ ವಾತಾವರಣ ಸೃಷ್ಟಿಸಲು ಗ್ರಾಮ ಪಂಚಾಯಿತಿ ವಹಿಸಿದ ನಿರಂತರ ಆಸಕ್ತಿ ಹಾಗೂ ಕಾಳಜಿಗೆ ಸಾರ್ವಜನಿಕರಿಂದ, ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.