ಶ್ರೀಮಂಗಲ, ಜು. ೨೪: ಪೊನ್ನಂಪೇಟೆಯ ಕ್‌ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗ ವತಿಯಿಂದ ೧೫ನೇ ವರ್ಷದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮ ಆಗಸ್ಟ್ ೩ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾಹಿತಿ ನೀಡಿದರು.
ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೇಶನ್ ಸಭಾಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ ೩ ರಂದು ಸಂಜೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಡಾ.ಕುಶಾಲಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಪೊನ್ನಂಪೇಟೆ ಮುಖ್ಯಬೀದಿಯಲ್ಲಿ ಸಂಜೆ ೬ ಗಂಟೆಗೆ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುರ್ಕಂಗ ಕೊಡವ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕೊಡವ ಜನಾಂಗಕ್ಕೆ ಕಕ್ಕಡ ಪದ್‌ನೆಟ್ಟ್ ಪ್ರಮುಖ ಆಚರಣೆಯಾಗಿದ್ದು, ಮಳೆ-ಚಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತಾಪಿ ಬಾಂಧವರು ತಮ್ಮ ದೇಹವನ್ನು ಉಷ್ಣಾಂಶವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿಯಲ್ಲಿ ದೊರಕುವ ವಿಶಿಷ್ಟ ಸೊಪ್ಪು ಹಾಗೂ ನಾಟಿ ಕೋಳಿ, ಅಣಬೆ, ಏಡಿ, ಮೀನು, ಮುಂತಾದ ಪದಾರ್ಥಗಳಿಂದ ವಿಶಿಷ್ಟ ಭೋಜನವನ್ನು ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಂಡು ಗದ್ದೆ ಕೆಲಸಗಳಿಗೆ ತಯಾರಾಗುವ ದಿನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭತ್ತದ ಗದ್ದೆಗಳ ಕೆಲಸ ಕಡಿಮೆಯಾಗಿದೆ. ಆದರೆ ಕೊಡವ ಹಿತ ರಕ್ಷಣಾ ಬಳಗ ಕಳೆದ ೧೪ ವರ್ಷಗಳಿಂದ ಜನಾಂಗದವರನ್ನು ಒಂದುಗೂಡಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಚಕ್ಕೆರ ರಮೇಶ್, ಗೌರವ ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಸದಸ್ಯರಾದ ಅಡ್ಡಂಡ ಸುನಿಲ್, ಆಲೇಮಾಡ ನವೀನ್, ಅಜ್ಜಿಕುಟ್ಟೀರ ರಂಜಿ, ಕೊಣಿಯಂಡ ಸಂಜು ಸೋಮಯ್ಯ, ಮುದ್ದಿಯಡ ಮಂಜು ಗಣಪತಿ, ಕರ್ತಮಾಡ ನರೇಂದ್ರ, ಚೇಂದಿರ ವಿಜು, ಮಲಚೀರ ಉತ್ತಪ್ಪ, ಚೆಪ್ಪುಡಿರ ಸುನೀಲ್, ಪುಳ್ಳಂಗಡ ಪವನ್, ಪಟ್ರಂಗಡ ರಂಜನ್, ಮಚ್ಚ ಮಾಡ ಮಂಜು,ತೀತಮಾಡ ವಾಸು, ಮತ್ರಂಡ ಜತಿನ್, ಚೇಯಂಡ ಶಮಿ, ಅಜ್ಜಿಕುಟ್ಟಿರ ಶುಭ, ಬೊಳ್ಳಿಮಾಡ ಧನು ದೇವಯ್ಯ, ಉಳುವಂಗಡ ಲೋಹಿತ್ ಭೀಮಯ್ಯ ಉಪಸ್ಥಿತರಿದ್ದರು.